ಮ್ಯಾಸ್ಕಾಟ್‌ಗಳಿಗೆ ಹೆಸರಿಡೋಣ ಬನ್ನಿ:ಐಸಿಸಿಯ ವಿನೂತನ ಕಾರ್ಯಕ್ರಮ ಬೆಂಗಳೂರು: ಇದೇ ಅಕ್ಟೋಬರ್‌ನಲ್ಲಿ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಮ್ಯಾಸ್ಕಾಟ್‌ಗಳನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಶನಿವಾರ ಬಿಡುಗಡೆ ಮಾಡಿದೆ. ಆದರೆ ಅವುಗಳಿಗೆ ಹೆಸರು ಇಟ್ಟಿಲ್ಲ! ಈ ಬಾರಿಯ ಮ್ಯಾಸ್ಕಾಟ್‌ಗಳಿಗೆ ಹೆಸರಿಡುವ ಅವಕಾಶವನ್ನು ಕ್ರಿಕೆಟ್‌ ಅಭಿಮಾನಿಗಳಿಗೆ ನೀಡಲಾಗಿದೆ. ಗುರುಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮ್ಯಾಸ್ಕಾಟ್‌ಗಳನ್ನು 19 ವರ್ಷದೊಳಗಿನವರ ವಿಶ್ವಕಪ್ ವಿಜೇತ ಮಹಿಳಾ ತಂಡದ ನಾಯಕಿ ಶಫಾಲಿ ವರ್ಮಾ ಮತ್ತು ಪುರುಷರ ತಂಡದ ನಾಯಕ ಯಶ್ ಧುಳ್ ಅವರು ಅನಾವರಣಗೊಳಿಸಿದರು. ನವ ಪೀಳಿಗೆಯ ಅಭಿಮಾನಿಗಳನ್ನು ಒಳಗೊಳ್ಳುವಿಕೆಗಾಗಿ ಯುವ ಆಟಗಾರರಿಂದ ಬಿಡುಗಡೆ ಮಾಡಿಸಲಾಗಿದೆ. ‘ಮ್ಯಾಸ್ಕಾಟ್‌ಗಳನ್ನು ಅನಾವರಣ ಮಾಡಿರುವುದು ಅಪಾರ ಸಂತಸ ತಂದಿದೆ. ಎರಡೂ ಮ್ಯಾಸ್ಕಾಟ್‌ಗಳು ಲಿಂಗ ಸಮಾನತೆಯನ್ನು ಸಾರುತ್ತವೆ. ಇವತ್ತಿನ ನವಯುಗದಲ್ಲಿ ಪುರುಷ ಮತ್ತು ಮಹಿಳೆಯರು ಸಮಾನ ಸಮರ್ಥರು. ಅವರಿಬ್ಬರ ಕಾಣಿಕೆಯೂ ಜಾಗತಿಕ ಮಟ್ಟದ ಬೆಳವಣಿಗೆಗೆ ಮುಖ್ಯ. ಈ ಮ್ಯಾಸ್ಕಾಟ್‌ಗಳು ಪಂದ್ಯಗಳಲ್ಲಿ ಮಕ್ಕಳನ್ನು ಮನರಂಜಿಸಲಿವೆ. ಅವರನ್ನೂ ಕ್ರಿಕೆಟ್‌ ಚಟುವಟಿಕೆಯಲ್ಲಿ ಒಳಗೊಳ್ಳಲಿದೆ‘ ಎಂದು ಐಸಿಸಿ ಚಟುವಟಿಕೆಗಳ ಮುಖ್ಯಸ್ಥ ಕ್ರಿಸ್ ಟೆಟ್ಲಿ ಹೇಳಿದರು. ಮ್ಯಾಸ್ಟಾಟ್‌ಗಳ ವಿಡಿಯೊ ಕೂಡ ಇದೇ ಸಂದರ್ಭದಲ್ಲಿ ಬಿಡುಗಡೆ ಆಗಿದೆ. ಐಸಿಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರದರ್ಶಿತಗೊಂಡಿದೆ. ಆಗಸ್ಟ್ 27ರೊಳಗೆ ವೆಬ್‌ಸೈಟ್ ://../ ಮೂಲಕ ಹೆಸರು ಸೂಚಿಸಬಹುದು ಎಂದು ಐಸಿಸಿ ಪ್ರಕಟಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.