ಕ್ರಿಕೆಟ್ ಟೂರ್ನಿ: ಹುಬ್ಬಳ್ಳಿ ಟೈಗರ್ಸ್ ಅಜೇಯ ಓಟ ಬೆಂಗಳೂರು: ಮೈಸೂರಿನ ಹುಡುಗ ಮನ್ವಂತ್ ಕುಮಾರ್ ಮತ್ತೊಮ್ಮೆ ತಮ್ಮ ಕೈಚಳಕ ಮೆರೆದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವು ಸತತ ಐದನೇ ಜಯ ಸಾಧಿಸಿತು. ಶನಿವಾರ ನಡೆದ ಪಂದ್ಯದಲ್ಲಿ ಪಂದ್ಯದಲ್ಲಿ ಮನ್ವಂತ್ (23ಕ್ಕೆ3) ಅಮೋಘ ಬೌಲಿಂಗ್ ಬಲದಿಂದ ಹುಬ್ಬಳ್ಳಿ ಟೈಗರ್ಸ್ ತಂಡವು 8 ವಿಕೆಟ್‌ಗಳಿಂದ ಶಿವಮೊಗ್ಗ ಲಯನ್ಸ್ ವಿರುದ್ಧ ಜಯಿಸಿತು.ಇದರೊಂದಿಗೆ ಒಟ್ಟು ಹತ್ತು ಅಂಕಗಳನ್ನು ಹುಬ್ಬಳ್ಳಿ ತಂಡವು ತನ್ನ ಬುಟ್ಟಿಗೆ ಹಾಕಿಕೊಂಡಿತು. ಟಾಸ್ ಗೆದ್ದ ಹುಬ್ಬಳ್ಳಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮನ್ವಂತ್ ಅವರ ಪರಿಣಾಮಕಾರಿ ದಾಳಿಯ ಮುಂದೆ ಶಿವಮೊಗ್ಗ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 138 ರನ್‌ಗಳ ಸಾಧಾರಣ ಮೊತ್ತ ಗಳಿಸಿತು. ಶಿವಮೊಗ್ಗ ತಂಡದ ಎಲ್ಲ ಅಗ್ರಕ್ರಮಾಂಕದ ಬ್ಯಾಟರ್‌ಗಳೂ ವೈಫಲ್ಯ ಅನುಭವಿಸಿದರು. ಆದರೆ, ಎಂಟನೇ ಕ್ರಮಾಂಕದ ಬ್ಯಾಟರ್ ಪ್ರಣವ್ ಭಾಟಿಯಾ 30 ಎಸೆತಗಳಲ್ಲಿ ಅಜೇಯ 46 ರನ್ ಗಳಿಸಿ ತಂಡದ ಗೌರವ ಉಳಿಸಿದರು. ಗುರಿ ಬೆನ್ನಟ್ಟಿದ ಹುಬ್ಬಳ್ಳಿ ತಂಡಕ್ಕೆ ಲವನೀತ್ ಸಿಸೊಡಿಯಾ (69; 45ಎ, 4X10, 6X2) ಮತ್ತು ಮೊಹಮ್ಮದ್ ತಾಹ (37; 26ಎ, 4X3, 6X3) ಮೊದಲ ವಿಕೆಟ್ ಜೊತೆಯಾಟದಲ್ಲಿ 85 ರನ್ ಗಳಿಸಿದರು. ಇದರಿಂದಾಗಿ ತಂಡವು 16.4 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 139 ರನ್‌ ಗಳಿಸಿ ಗೆದ್ದಿತು. ಸಂಕ್ಷಿಪ್ತ ಸ್ಕೋರು: ಶಿವಮೊಗ್ಗ ಲಯನ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 138 (ಪ್ರಣವ್ ಭಾಟಿಯಾ ಔಟಾಗದೆ 46, ಎಸ್. ಶಿವರಾಜ್ 21, ರೋಹನ್ ನವೀನ್ 18, ರೋಹನ್ ಕದಂ 14, ಮನ್ವಂತ್ ಕುಮಾರ್ ಎಲ್. 23ಕ್ಕೆ3, ಪ್ರವೀಣ ದುಬೆ 15ಕ್ಕೆ2) ಹುಬ್ಬಳ್ಳಿ ಟೈಗರ್ಸ್: 16.4 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 139 (ಲವನೀತ್ ಸಿಸೊಡಿಯಾ 69, ಮೊಹಮ್ಮದ್ ತಾಹ 37, ನಾಗ ಭರತ್ ಔಟಾಗದೆ 23, ಪ್ರಣವ್ ಭಾಟಿಯಾ 27ಕ್ಕೆ1, ಶ್ರೇಯಸ್ ಗೋಪಾಲ್ 41ಕ್ಕೆ1) ಫಲಿತಾಂಶ: ಹುಬ್ಬಳ್ಳಿ ಟೈಗರ್ಸ್‌ಗೆ 8 ವಿಕೆಟ್‌ಗಳ ಜಯ. ಇಂದಿನ ಪಂದ್ಯಗಳು ಮೈಸೂರು ವಾರಿಯರ್ಸ್–ಹುಬ್ಬಳ್ಳಿ ಟೈಗರ್ಸ್ (ಮಧ್ಯಾಹ್ನ 1ರಿಂದ) ಗುಲ್ಬರ್ಗ ಮಿಸ್ಟಿಕ್ಸ್–ಮಂಗಳೂರು ಡ್ರ್ಯಾಗನ್ಸ್ (ಸಂಜೆ 5.30) ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ಕನ್ನಡ, ಫ್ಯಾನ್‌ಕೋಡ್ ಆ್ಯಪ್ ಕಾರ್ತಿಕ್ ಆಲ್‌ರೌಂಡ್ ಆಟ ಕೋದಂಡ ಅಜಿತ್ ಕಾರ್ತಿಕ್ (62; 43e 4X7 6X2 ಹಾಗೂ 16ಕ್ಕೆ2) ಆಲ್‌ರೌಂಡ್ ಆಟದ ಬಲದಿಂದ ಮೈಸೂರು ವಾರಿಯರ್ಸ್ ತಂಡವು 33 ರನ್‌ಗಳಿಂದ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಜಯಿಸಿತು. ಮಳೆ ಬಂದು ಕೆಲಹೊತ್ತು ಆಟದ ಸಮಯ ವ್ಯರ್ಥವಾದ ಕಾರಣ ವಿ. ಜಯದೇವನ್ ನಿಯಮದ ಅನ್ವಯ ಫಲಿತಾಂಶ ನಿರ್ಧಾರವಾಯಿತು. ಟಾಸ್ ಗೆದ್ದ ಬೆಂಗಳೂರು ತಂಡದ ನಾಯಕ ಮಯಂಕ್ ಅಗರವಾಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೈಸೂರು ತಂಡವು ಕಾರ್ತಿಕ್ ಮತ್ತು ಕೊನೆಯ ಹಂತದಲ್ಲಿ ಜೆ. ಸುಚಿತ್ (31; 14ಎ) ಅವರ ಬ್ಯಾಟಿಂಗ್ ಬಲದಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 185 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಬೆಂಗಳೂರು ತಂಡವು 11.1 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 81 ರನ್‌ ಗಳಿಸಿತು. ಈ ಹಂತದಲ್ಲಿ ಮಳೆ ಸುರಿಯಲು ಆರಂಭವಾಯಿತು. ಮತ್ತೆ ಪಂದ್ಯ ಮುಂದುವರಿಸುವ ಅವಕಾಶ ಸಿಗದ ಕಾರಣ ವಿಜೆಡಿ ನಿಯಮದ ಅನ್ವಯ ಲೆಕ್ಕಾಚಾರದಲ್ಲಿ ಬೆಂಗಳೂರು ಸೋಲನುಭವಿಸಿತು. ಟೂರ್ನಿಯಲ್ಲಿ ಬೆಂಗಳೂರು ತಂಡಕ್ಕೆ ಸೋಲಿನ ಸರಪಳಿ ಕಳಚಲು ಸಾಧ್ಯವಾಗಲಿಲ್ಲ. ಮೈಸೂರು ವಾರಿಯರ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 185 (ಸಿ.ಎ. ಕಾರ್ತಿಕ್ 62 ತುಷಾರ್ ಸಿಂಗ್ 19 ಮನೋಜ್ ಬಾಂಢಗೆ 28 ಜೆ. ಸುಚಿತ್ ಔಟಾಗದೆ 31 ಶುಭಾಂಗ್ ಹೆಗಡೆ 23ಕ್ಕೆ4 ರಿಷಿ ಬೋಪಣ್ಣ 19ಕ್ಕೆ2) ಬೆಂಗಳೂರು ಬ್ಲಾಸ್ಟರ್ಸ್: 11.1 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 81 (ಜೆಸ್ವಂತ್ ಆಚಾರ್ಯ ಔಟಾಗದೆ 19 ಸೂರಜ್ ಅಹುಜಾ 31 ಸಿ.ಎ. ಕಾರ್ತಿಕ್ 16ಕ್ಕೆ2 ಜೆ. ಸುಚಿತ್ 8ಕ್ಕೆ2) ಫಲಿತಾಂಶ: ಮೈಸೂರು ವಾರಿಯರ್ಸ್‌ಗೆ 33 ರನ್‌ ಜಯ (ವಿಜೆಡಿ ಪದ್ಧತಿಯನ್ವಯ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.