ಕನ್ನಡ ಕಡೆಗಣನೆ: ಕ್ರಿಕೆಟ್ ಸಂಸ್ಥೆಗೆ ನೋಟಿಸ್ ಬೆಂಗಳೂರು: ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಕನ್ನಡ ಕಡೆಗಣಿಸಲಾಗುತ್ತಿದೆ ಎಂಬ ಕಾರಣಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೋಟಿಸ್ ನೀಡಿದೆ. ‘ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಆಡಳಿತದ ಎಲ್ಲಾ ಹಂತದಲ್ಲೂ ಕನ್ನಡ ಅನುಷ್ಠಾನಗೊಳಿಸಬೇಕು ಎವುದು ಸರ್ಕಾರದ ಆಶಯ. ಕನ್ನಡ ಭಾಷೆ ಬಳಕೆಗೆ ಸಂಬಂಧಿಸಿದಂತೆ ಸರ್ಕಾರವು ಸಾಕಷ್ಟು ಆದೇಶ ಮತ್ತು ಸುತ್ತೋಲೆಗಳನ್ನು ಹೊರಡಿಸಿದೆ. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸ್ವಾಮ್ಯದ ಉದ್ಯಮಗಳು, ಕಾರ್ಖಾನೆಗಳು, ಖಾಸಗಿ ಸಂಸ್ಥೆಗಳು, ಬ್ಯಾಂಕುಗಳು ಆಯಾ ರಾಜ್ಯ ಭಾಷೆಯಲ್ಲಿ ವ್ಯವಹರಿಸಬೇಕು. ಸರ್ಕಾರ ರೂಪಿಸಿದ ಎಲ್ಲಾ ನಿಯಮಗಳನ್ನು ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳು ಪಾಲಿಸುವುದು ಕಡ್ಡಾಯ. ಆದರೆ, ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ ಕನ್ನಡ ಕಡೆಗಣಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ ತಿಳಿಸಿದ್ದಾರೆ. ‘ಮಹಾರಾಜ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಿಸಿದಂತೆ ಆ.11ರಂದು ನಡೆಸಲಾದ ಸುದ್ದಿಗೋಷ್ಠಿಯಲ್ಲಿ ಕನ್ನಡದ ನಾಮಫಲಕ ಹಾಕಿರಲಿಲ್ಲ. ಕನ್ನಡದಲ್ಲಿ ಮಾತನಾಡದೆ ಕನ್ನಡ ಕಡೆಗಣಿಸಲಾಗಿದೆ. ಆಟಗಾರರ ಹರಾಜು ಪ್ರಕ್ರಿಯೆ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿಯೂ ಕನ್ನಡಕ್ಕೆ ಆದ್ಯತೆ ನೀಡಿಲ್ಲ. ಈ ಬಗ್ಗೆ ಟೀಕೆ ವ್ಯಕ್ತವಾಗಿದೆ. ಕಾರ್ಯಕ್ರಮಗಳು ಆಂಗ್ಲಮಯವಾಗಿರುವುದು ವಿಷಾದನೀಯ’ ಎಂದು ಹೇಳಿದ್ದಾರೆ. ‘ಈ ನೆಲದ ಸಂಪನ್ಮೂಲಗಳನ್ನು ಬಳಸಿಕೊಂಡು, ಕರ್ನಾಟಕದಲ್ಲಿ ಅಸ್ತಿತ್ವ ಪಡೆದುಕೊಂಡಿರುವ ಅಸೋಸಿಯೇಷನ್ ಕನ್ನಡ ಕಡೆಗಣಿಸುತ್ತಿರುವುದು ಅಕ್ಷಮ್ಯ. ಆದ್ದರಿಂದ ಏಳು ದಿನಗಳ ಒಳಗೆ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು’ ಎಂದು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.