ಟಿ20: ಸರಣಿ ಕೈವಶದತ್ತ ಬೂಮ್ರಾ ಪಡೆ ಕಣ್ಣು ಡಬ್ಲಿನ್, ಐರ್ಲೆಂಡ್ : ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಐರ್ಲೆಂಡ್ ಎದುರಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಫಿಟ್‌ನೆಸ್ ಮತ್ತು ನಾಯಕತ್ವದ ಪರೀಕ್ಷೆಗಳಲ್ಲಿ ಯಶಸ್ವಿಯಾದರು. ಹನ್ನೊಂದು ತಿಂಗಳುಗಳ ನಂತರ ಕ್ರಿಕೆಟ್ ಕಣಕ್ಕೆ ಮರಳಿದ ಬೂಮ್ರಾ ತಮ್ಮ ಚೊಚ್ಚಲ ನಾಯಕತ್ವದ ಸರಣಿಯನ್ನು ಗೆಲ್ಲುವ ಹೊಸ್ತಿಲಲ್ಲಿದ್ದಾರೆ. ಭಾನುವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಜಯಿಸುವ ವಿಶ್ವಾಸ ಭಾರತಕ್ಕೆ ಇದೆ. ಮೂರು ಪಂದ್ಯಗಳ ಸರಣಿಯಲ್ಲಿ ಭಾರತವು 1–0ಯಿಂದ ಮುಂದಿದೆ. ಶುಕ್ರವಾರ ನಡೆದ ಪ್ರಥಮ ಪಂದ್ಯದಲ್ಲಿ 139 ರನ್‌ಗಳಿಗೆ ಐರ್ಲೆಂಡ್ ಬಳಗವನ್ನು ಕಟ್ಟಿಹಾಕುವಲ್ಲಿ ಬೂಮ್ರಾ, ಪ್ರಸಿದ್ಧಕೃಷ್ಣ ಮತ್ತು ಸ್ಪಿನ್ನರ್ ರವಿ ಬಿಷ್ಣೋಯಿ ಯಶಸ್ವಿಯಾಗಿದ್ದರು. ಭಾರತದ ಇನಿಂಗ್ಸ್‌ ನಡೆಯುವ ಹೊತ್ತಿನಲ್ಲಿ ಮಳೆ ಸುರಿದ ಕಾರಣ ಡಕ್ವರ್ಥ್ ಲೂಯಿಸ್ ನಿಯಮ ಅನ್ವಯಿಸಲಾಯಿತು. ಬೂಮ್ರಾ ಬಳಗವು 2 ರನ್‌ ಅಂತರದಿಂದ ಜಯಿಸಿತು. ಯಶಸ್ವಿ ಜೈಸ್ವಾಲ್ ಮತ್ತು ಋತುರಾಜ್ ಗಾಯಕವಾಡ ಅವರು ಉತ್ತಮ ಆರಂಭ ನೀಡಿದರು. ಆದರೆ ಪೂರ್ಣ ಇನಿಂಗ್ಸ್‌ ನಡೆಯದ ಕಾರಣ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಸಾಮರ್ಥ್ಯ ಪರೀಕ್ಷೆಗೆ ಅವಕಾಶ ಸಿಗಲಿಲ್ಲ. ಆದ್ದರಿಂದ ಎರಡನೇ ಪಂದ್ಯದಲ್ಲಿ ರಿಂಕು ಸಿಂಗ್, ಶಿವಂ ದುಬೆ ಮತ್ತು ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ಸಿಗಬಹುದು. ಅಲ್ಲದೇ ಅವರ ಆಟದ ಮೇಲೆ ಆಯ್ಕೆಗಾರರ ಕಣ್ಣು ಇರುವುದು ನಿಶ್ಚಿತ. ತಂಡದಲ್ಲಿರುವ ಮತ್ತೊಬ್ಬ ವಿಕೆಟ್‌ಕೀಪರ್ ಜಿತೇಶ್ ಶರ್ಮಾ ಅವರೂ ಅವಕಾಶಕ್ಕಾಗಿ ಕಾದಿದ್ದಾರೆ. ಬೌಲಿಂಗ್‌ನಲ್ಲಿ ಮೊದಲ ಪಂದ್ಯವಾಡಿದ ಆರ್ಷದೀಪ್ ಸಿಂಗ್ ಅವರಿಗೆ ವಿಶ್ರಾಂತಿ ಕೊಟ್ಟು ಮುಕೇಶ್ ಕುಮಾರ್ ಅಥವಾ ಆವೇಶ್ ಖಾನ್ ಅವರಲ್ಲಿ ಒಬ್ಬರಿಗೆ ಅವಕಾಶ ನೀಡುವ ಸಾಧ್ಯತೆಯೂ ಇದೆ. ಆತಿಥೇಯ ತಂಡದಲ್ಲಿ ಮೊದಲ ಪಂದ್ಯದಲ್ಲಿ ಅರ್ಧಶತ‌ಕ ಗಳಿಸಿದ್ದ ಬ್ಯಾರಿ ಮೆಕಾರ್ಥಿ ಮತ್ತು ಕರ್ಟಿಸ್ ಕ್ಯಾಂಫರ್ ಉತ್ತಮ ಬ್ಯಾಟಿಂಗ್ ಮಾಡಿದ್ದರು. ಉಳಿದವರು ನಿರಾಶೆ ಮೂಡಿಸಿದ್ದರು. ಸರಣಿ ಗೆಲುವಿನ ಅವಕಾಶ ಉಳಿಸಿಕೊಳ್ಳಬೇಕಾದರೆ ಐರ್ಲೆಂಡ್ ತಂಡವು ಈ ಪಂದ್ಯದಲ್ಲಿ ಜಯಿಸಲೇಬೇಕು. ಆದ್ದರಿಂದ ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪಣಕ್ಕೊಡ್ಡುವ ಅನಿವಾರ್ಯತೆ ಇದೆ. ತಂಡಗಳು ಭಾರತ: ಜಸ್‌ಪ್ರೀತ್ ಬೂಮ್ರಾ(ನಾಯಕ), ಋತುರಾಜ್ ಗಾಯಕವಾಡ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ಜಿತೇಶ್ ಶರ್ಮಾ(ವಿಕೆಟ್‌ಕೀಪರ್‌), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹಮದ್, ರವಿ ಬಿಷ್ಣೋಯಿ, ಪ್ರಸಿದ್ಧಕೃಷ್ಣ, ಆರ್ಷದೀಪ್ ಸಿಂಗ್, ಮುಕೇಶ್ ಕುಮಾರ್, ಆವೇಶ್ ಖಾನ್ ಐರ್ಲೆಂಡ್: ಆ್ಯಂಡ್ರ್ಯೂ ಬಲ್ಬಿರ್ನಿ (ನಾಯಕ), ಹ್ಯಾರಿ ಟೆಕ್ಟರ್, ಲಾರ್ಕನ್ ಟಕ್ಕರ್, ರಾಸ್ ಅಡೇರ್, ಮಾರ್ಕ್ ಅಡೇರ್, ಕರ್ಟಿಸ್ ಕ್ಯಾಂಫರ್, ಗೆರೆತ್ ಡೆಲನಿ, ಜಾರ್ಜ್ ಡಾಕ್ರೆಲ್, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ಬೆನ್ ವೈಟ್, ಕ್ರೇಗ್ ಯಂಗ್, ಥಿಯೊ ವ್ಯಾನ್ ವೇರಕೊಮ್. ಪ‍ಂದ್ಯ ಆರಂಭ: ರಾತ್ರಿ 7.30 ಸ್ಪೋರ್ಟ್ಸ್ 18 ಹಾಗೂ ಜಿಯೊ ಸಿನಿಮಾ ಆ್ಯಪ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.