| ಕುಸಿದ ಭಾರತಕ್ಕೆ ಕಿಶನ್–ಹಾರ್ದಿಕ್ ಆಸರೆ; ಪಾಕ್‌ಗೆ ಸವಾಲಿನ ಗುರಿ ಪಲೇಕೆಲೆ: ಪಾಕಿಸ್ತಾನದ ಬಿರುಗಾಳಿ ವೇಗಿಗಳ ಎದುರು ದಿಟ್ಟ ಆಟವಾಡಿದ ಯುವ ಬ್ಯಾಟರ್‌ ಇಶಾನ್ ಕಿಶನ್ ಮತ್ತು ಉಪ ನಾಯಕ ಹಾರ್ದಿಕ್ ಪಾಂಡ್ಯ ಅವರ ಬ್ಯಾಟಿಂಗ್ ನೆರವಿನಂದ ಭಾರತ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದೆ. ಇಲ್ಲಿನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಾಸ್‌ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್‌ ಆಯ್ದುಕೊಂಡರು. ಆದರೆ, ಪಾಕ್‌ ವೇಗಿಗಳ ಶಿಸ್ತಿನ ದಾಳಿ ಎದುರು ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಶುಭಮನ್ ಗಿಲ್‌ ಜೊತೆಗೆ ಇನಿಂಗ್ಸ್‌ ಆರಂಭಿಸಿದ ಶರ್ಮಾ ಕೇವಲ 11 ರನ್‌ ಗಳಿಸಿ ಔಟಾದರು. ಬಳಿಕ ಬಂದ ಅನುಭವಿ ವಿರಾಟ್‌ ಕೊಹ್ಲಿ ಆಟ ಕೇವಲ 4 ರನ್‌ ಗಳಿಗೆ ಕೊನೆಗೊಂಡಿತು. ಗಿಲ್‌ (10) ಹಾಗೂ ಶ್ರೇಯಸ್‌ ಅಯ್ಯರ್‌ (14) ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೀಗಾಗಿ ಟೀಂ ಇಂಡಿಯಾ 66 ರನ್‌ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು. ಹಾರ್ದಿಕ್‌–ಕಿಶನ್ ಆಸರೆ ಈ ಹಂತದಲ್ಲಿ ಜೊತೆಯಾದ ಹಾರ್ದಿಕ್ ಪಾಂಡ್ಯ ಮತ್ತು ಇಶಾನ್ ಕಿಶನ್‌ ಐದನೇ ವಿಕೆಟ್ ಪಾಲುದಾರಿಕೆಯಲ್ಲಿ 138 ರನ್‌ ಕಲೆಹಾಕಿದರು. ಮೊದಲಿಗೆ ರಕ್ಷಣಾತ್ಮಕ ಆಟವಾಡಿದ ಈ ಜೋಡಿ ನಿಧಾನವಾಗಿ ಗೇರ್‌ ಬದಲಿಸಿತು. ಇಶಾನ್‌ 81 ಎಸೆತಗಳಲ್ಲಿ 2 ಸಿಕ್ಸರ್‌ ಹಾಗೂ 9 ಬೌಂಡರಿ ಸಹಿತ 82 ರನ್ ಗಳಿಸಿದರೆ, 90 ಎಸೆತಗಳನ್ನು ಎದುರಿಸಿದ ಹಾರ್ದಿಕ್‌ 1 ಸಿಕ್ಸರ್‌ ಮತ್ತು 7 ಬೌಂಡರಿಗಳಿದ್ದ 87 ರನ್ ಬಾರಿಸಿದರು. ಇವರಿಬ್ಬರ ವಿಕೆಟ್‌ ಪತನದ ಬಳಿಕ ರವೀಂದ್ರ ಜಡೇಜ 14 ರನ್‌ ಗಳಿಸಿದರು. ಕೊನೆಯಲ್ಲಿ ಜಸ್‌ಪ್ರೀತ್‌ ಬೂಮ್ರಾ (16) ಮೂರು ಬೌಂಡರಿ ಬಾರಿಸಿ ಗಮನ ಸೆಳೆದರು. ಅಂತಿಮವಾಗಿ ಭಾರತ 48.5 ಓವರ್‌ಗಳಲ್ಲಿ 266 ರನ್‌ ಗಳಿಸಿ ಆಲೌಟ್‌ ಆಯಿತು. ಪಾಕ್‌ ಪರ ತ್ರಿವಳಿ ವೇಗಿಗಳಾದ ಶಾಹೀನ್‌ ಅಫ್ರಿದಿ (4), ಹ್ಯಾರಿಸ್‌ ರೌಫ್‌ (3) ಮತ್ತು ನಸೀಂ ಶಾ (3) ಎಲ್ಲ ವಿಕೆಟ್‌ಗಳನ್ನು ಹಂಚಿಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.