2023- ಭಾರತ–ಪಾಕ್ ಪಂದ್ಯಕ್ಕೆ ಮಳೆ ಅಡ್ಡಿ: ಪಂದ್ಯ ಸ್ಥಗಿತ, ಅಂಕ ಹಂಚಿಕೆ ಪಲೇಕೆಲೆ: ಶನಿವಾರ ರಾತ್ರಿ ಭಾರತ ಮತ್ತು ಪಾಕಿಸ್ತಾನ ಹಣಾಹಣಿಯು ರೋಚಕ ಅಂತ್ಯ ಕಾಣುವ ನಿರೀಕ್ಷೆಯಲ್ಲಿದ್ದ ಕ್ರಿಕೆಟ್‌ಪ್ರೇಮಿಗಳ ಆಸೆಗೆ ಮಳೆರಾಯ ಅಡ್ಡಿಯಾದ. ಇಲ್ಲಿ ನಡೆದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಅವರ ದಿಟ್ಟ ಆಟದ ಬಲದಿಂದ ಭಾರತ ತಂಡವು ಗಳಿಸಿದ 266 ರನ್‌ಗಳ ಗುರಿಯನ್ನು ಬೆನ್ನಟ್ಟಲು ಪಾಕಿಸ್ತಾನಕ್ಕೆ ಅವಕಾಶ ಸಿಗಲಿಲ್ಲ. ಮಳೆಯಿಂದಾಗಿ ಆಟವನ್ನು ಸ್ಥಗಿತಗೊಳಿಸಿ ಉಭಯ ತಂಡಗಳಿಗೆ ತಲಾ ಒಂದು ಅಂಕ ನೀಡಲಾಯಿತು. ಆದರೆ, ಈ ಪಂದ್ಯದಲ್ಲಿ ಭಾರತದ ಅಗ್ರಕ್ರಮಾಂಕದ ಬ್ಯಾಟರ್‌ಗಳ ದೌರ್ಬಲ್ಯಗಳು ಬಹಿರಂಗವಾದವು. ಪಾಕ್ ತಂಡದ ಶಾಹೀನ್ ಆಫ್ರಿದಿ (35ಕ್ಕೆ4), ನಸೀಂ ಶಹಾ (36ಕ್ಕೆ3) ಹಾಗೂ ಹ್ಯಾರಿಸ್ ರವೂಫ್ (58ಕ್ಕೆ3) ಅವರ ದಾಳಿಗೆ ಭಾರತದ ಪ್ರಮುಖ ಬ್ಯಾಟರ್‌ಗಳು ತತ್ತರಿಸಿದರು. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವರು ತಮ್ಮ ಮೇಲಿನ ನಿರೀಕ್ಷೆಯನ್ನು ಹುಸಿಗೊಳಿಸಿದರು. ಆದರೆ, ಪಾಕ್ ಬೌಲರ್‌ಗಳ ಶಿಸ್ತಿನ ದಾಳಿಯ ಸವಾಲನ್ನು ಮೀರಿ ನಿಂತ ಇಶಾನ್ (82; 81ಎ, 4X9, 6X2) ಮತ್ತು ಹಾರ್ದಿಕ್ (87; 90ಎ, 4X7, 6X1) ಐದನೇ ವಿಕೆಟ್ ಜೊತೆಯಾಟದಲ್ಲಿ 138 ರನ್‌ ಸೇರಿಸಿದರು. ಇದರಿಂದಾಗಿ ತಂಡವು ಹೋರಾಟದ ಮೊತ್ತ ಗಳಿಸಿತು. ಪ್ರಮುಖ ಬ್ಯಾಟರ್‌ಗಳ ವೈಫಲ್ಯದಿಂದಾಗಿ ಭಾರತ ತಂಡವು 66 ರನ್‌ಗಳಿಗೇ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ಹಂತದಲ್ಲಿ ತಂಡಕ್ಕೆ ಇಶಾನ್ ಮತ್ತು ಹಾರ್ದಿಕ್ ಆಟ ಮರುಜೀವ ನೀಡಿತು. ಇಶಾನ್ 101.23ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದರು. ಎರಡು ಚೆಂದದ ಸಿಕ್ಸರ್ ಕೂಡ ಸಿಡಿಸಿ, ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂತಸದ ಹೊನಲು ಹರಿಸಿದರು. ಕೆ.ಎಲ್. ರಾಹುಲ್ ಗಾಯಗೊಂಡು ವಿಶ್ರಾಂತಿಯಲ್ಲಿರುವುದರಿಂದ ಇಶಾನ್ ಅವಕಾಶ ಪಡೆದಿದ್ದರು. ಅದನ್ನು ಸಮರ್ಥವಾಗಿ ಬಳಸಿಕೊಂಡರು. ಇಶಾನ್ ಹಾಗೂ ಹಾರ್ದಿಕ್ ಚುರುಕಾದ ಸಿಂಗಲ್‌ ಮತ್ತು ಡಬಲ್‌ ರನ್‌ಗಳನ್ನು ಗಳಿಸಿ ಫೀಲ್ಡರ್‌ಗಳ ಮೇಲೆ ಒತ್ತಡ ಹೆಚ್ಚಿಸಿದರು. ತಂಡದ ಮೊತ್ತ 200ರ ಗಡಿ ದಾಟಿದ ನಂತರ ಹ್ಯಾರಿಸ್ ರವೂಫ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ಇಶಾನ್, ಪಾಕ್ ತಂಡದ ನಾಯಕ ಬಾಬರ್ ಆಜಂ ಅವರಿಗೆ ಕ್ಯಾಚ್ ಕೊಟ್ಟರು. ಶತಕದತ್ತ ಸಾಗಿದ್ದ ಹಾರ್ದಿಕ್ ಅವರಿಗೆ ಶಾಹೀನ್ ಆಫ್ರಿದಿ ಪೆವಿಲಿಯನ್ ದಾರಿ ತೋರಿಸಿದರು. ನಂತರ ಬಂದ ಬ್ಯಾಟರ್‌ಗಳಲ್ಲಿ ರವೀಂದ್ರ ಜಡೇಜ ಹಾಗೂ ಜಸ್‌ಪ್ರೀತ್ ಬೂಮ್ರಾ ಕ್ರಮವಾಗಿ 14 ಹಾಗೂ 16 ರನ್‌ ಗಳಿಸಿದರು. ಬೌಲರ್‌ಗಳ ಪಾರಮ್ಯ: ಪರಿಣಾಮಕಾರಿ ಸ್ವಿಂಗ್, ಉತ್ತಮ ಲೈನ್ ಹಾಗೂ ಲೆಂಗ್ತ್‌ ಎಸೆತಗಳನ್ನು ಪ್ರಯೋಗಿಸಿದ ಬೌಲರ್‌ಗಳ ಮುಂದೆ ಭಾರತದ ಅನುಭವಿ ಬ್ಯಾಟರ್ ರೋಹಿತ್ ಶರ್ಮಾ ಹಾಗೂ ವಿರಾಟ್ ಕೂಡ ತಡಕಾಡಿದರು. ಐದನೇ ಓವರ್‌ನಲ್ಲಿಯೇ ರೋಹಿತ್ ಅವರನ್ನು ಕ್ಲೀನ್‌ಬೌಲ್ಡ್‌ ಮಾಡಿದ ಆಫ್ರಿದಿ ಭಾರತ ತಂಡಕ್ಕೆ ಮೊದಲ ಆಘಾತ ನೀಡಿದರು. ಏಳನೇ ಓವರ್‌ನಲ್ಲಿ ವಿರಾಟ್ ಕೂಡ ಆಫ್ರಿದಿ ಎಸೆತದಲ್ಲಿ ಬೌಲ್ಡ್‌ ಆದರು. ಕ್ರೀಸ್‌ನಲ್ಲಿ ನೆಲೆಯೂರಲು ಪ್ರಯತ್ನದಲ್ಲಿದ್ದ ಶುಭಮನ್ ಗಿಲ್ ಕೂಡ ಹತ್ತು ರನ್ ಗಳಿಸಿ ರವೂಫ್ ಎಸೆತದಲ್ಲಿ ಔಟಾದರು. ಆರು ತಿಂಗಳುಗಳ ಹಿಂದೆ ಗಾಯಗೊಂಡು ಶಸ್ತ್ರಚಿಕಿತ್ಸೆಗೊಳಗಾಗಿದ್ದ ಶ್ರೇಯಸ್ ಅಯ್ಯರ್ ಮತ್ತೆ ಅಂಗಳಕ್ಕೆ ಮರಳಿದರು. ಎರಡು ಬೌಂಡರಿ ಹೊಡೆದು ಭರವಸೆ ಮೂಡಿಸಿದರು. ಆದರೆ ಅವರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.