| ಏಕದಿನ ಕ್ರಿಕೆಟ್‌ನಲ್ಲಿ ಸತತ 11ನೇ ಗೆಲುವು ಸಾಧಿಸಿದ ಶ್ರೀಲಂಕಾ ಪಲೇಕೆಲೆ: ಏಷ್ಯಾಕಪ್‌ ಏಕದಿನ ಕ್ರಿಕೆಟ್‌ ಟೂರ್ನಿಯ 'ಬಿ' ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 5 ವಿಕೆಟ್‌ ಅಂತರದ ಗೆಲುವು ಪಡೆದ ಶ್ರಿಲಂಕಾ, ಶುಭಾರಂಭ ಮಾಡಿದೆ. ಅಷ್ಟೇ ಅಲ್ಲದೆ, ಏಕದಿನ ಮಾದರಿಯಲ್ಲಿ ಸತತ 11ನೇ ಗೆಲುವು ಸಾಧಿಸಿ, ಅಜೇಯ ಓಟ ಮುಂದುವರಿಸಿದೆ. ಪಲೇಕೆಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 42.4 ಓವರ್‌ಗಳಲ್ಲಿ 164 ರನ್‌ ಗಳಿಸಿ ಆಲೌಟ್‌ ಆಗಿತ್ತು. ಈ ಗುರಿ ಬೆನ್ನತ್ತಿದ ಲಂಕಾ, ಸದೀರ ಸಮರವಿಕ್ರಂ (54) ಮತ್ತು ಚರಿತ ಅಸಲಂಕಾ (ಅಜೇಯ 62) ಗಳಿಸಿದ ಅರ್ಧಶತಕಗಳ ಬಲದಿಂದ 39 ಓವರ್‌ಗಳಲ್ಲೇ 165 ರನ್‌ ಗಳಿಸಿತು. ಶ್ರೀಲಂಕಾ ತನ್ನ ಮುಂದಿನ ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡದ ವಿರುದ್ಧ ಸೆಪ್ಟೆಂಬರ್‌ 05ರಂದು ಕಣಕ್ಕಿಳಿಯಲಿದೆ. ಸತತ 11ನೇ ಜಯ ಬಾಂಗ್ಲಾ ವಿರುದ್ಧದ ಗೆಲುವಿನೊಂದಿಗೆ ಶ್ರೀಲಂಕಾ ತಂಡ ಇದೇ ಮೊದಲ ಬಾರಿಗೆ ಸತತ 11ನೇ ಜಯ ಸಾಧಿಸಿತು. ಇದಕ್ಕೂ ಮುನ್ನ 2004 ಹಾಗೂ 2013–14ರಲ್ಲಿ ಸತತ 10 ಪಂದ್ಯಗಳಲ್ಲಿ ಜಯ ಕಂಡಿತ್ತು. ಒಟ್ಟಾರೆ ಅತಿ ಹೆಚ್ಚು ಪಂದ್ಯಗಳಲ್ಲಿ ಸತತವಾಗಿ ಜಯ ಸಾಧಿಸಿದ ತಂಡಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದೆ. ಆಸಿಸ್‌ ಬಳಗ 2003ರಲ್ಲಿ ಸತತ 21 ಗೆಲುವುಗಳನ್ನು ಗೆದ್ದು ದಾಖಲೆ ಬರೆದಿದೆ. ನಂತರದ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ತಂಡಗಳಿವೆ. ಆಫ್ರಿಕನ್ನರು ಎರಡು ಬಾರಿ (2005 ಹಾಗೂ 2016–17ರಲ್ಲಿ) ಸತತ 12 ಪಂದ್ಯಗಳನ್ನು ಜಯಿಸಿದ್ದಾರೆ. ಪಾಕ್‌ ಪಡೆ ಇಷ್ಟೇ ಪಂದ್ಯಗಳನ್ನು 2007–08ರಲ್ಲಿ ಸತತವಾಗಿ ಒಮ್ಮೆ ಗೆದ್ದಿತ್ತು. 1984–85ರಲ್ಲಿ ವೆಸ್ಟ್‌ ಇಂಡೀಸ್‌ ಸತತ 11 ಗೆಲುವು ಪಡೆದಿತ್ತು. 5- ! 🙌#AsiaCup2023 # ../gAmg41kql6 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.