ಮಹಾರಾಜ ಟ್ರೋಫಿ ಕ್ರಿಕೆಟ್‌: ಪ್ರಶಸ್ತಿಗೆ ಮೈಸೂರು– ಹುಬ್ಬಳ್ಳಿ ಸೆಣಸು ಬೆಂಗಳೂರು: ಮೈಸೂರು ವಾರಿಯರ್ಸ್‌ ಮತ್ತು ಹುಬ್ಬಳ್ಳಿ ಟೈಗರ್ಸ್‌ ತಂಡಗಳು ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಮಂಗಳವಾರ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಹುಬ್ಬಳ್ಳಿ ತಂಡ 8 ವಿಕೆಟ್‌ಗಳಿಂದ ಶಿವಮೊಗ್ಗ ಲಯನ್ಸ್ ತಂಡವನ್ನು ಮಣಿಸಿದರೆ, ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ವಾರಿಯರ್ಸ್‌ ತಂಡ, 36 ರನ್‌ಗಳಿಂದ ಗುಲ್ಬರ್ಗ ಮಿಸ್ಟಿಕ್ಸ್‌ ವಿರುದ್ಧ ಗೆದ್ದಿತು. ಕರುಣ್‌ ಅಬ್ಬರದ ಶತಕ: ಸಂಜೆ ನಡೆದ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿದ ನಾಯಕ ಕರುಣ್‌ ನಾಯರ್ (ಔಟಾಗದೆ 107; 42 ಎ., 4X7, 6X9) ಅವರು ಮೈಸೂರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೊದಲು ಬ್ಯಾಟ್‌ ಮಾಡಿದ ವಾರಿಯರ್ಸ್‌ 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 248 ರನ್‌ ಕಲೆಹಾಕಿತು. ಕರುಣ್‌ಗೆ ಉತ್ತಮ ಸಾಥ್‌ ನೀಡಿದ ಆರ್‌.ಸಮರ್ಥ್‌ 80 ರನ್‌ ಗಳಿಸಿದರು. ಇವರಿಬ್ಬರು ಎರಡನೇ ವಿಕೆಟ್‌ಗೆ 148 ರನ್‌ ಸೇರಿದರು. ಸವಾಲಿನ ಗುರಿ ಬೆನ್ನಟ್ಟಿದ ಗುಲ್ಬರ್ಗ, ದಿಟ್ಟ ಹೋರಾಟ ನಡೆಸಿದರೂ ಗೆಲುವು ದಕ್ಕಲಿಲ್ಲ. ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 212 ರನ್‌ ಪೇರಿಸಿತು. ಇನ್ನೊಂದು ಸೆಮಿ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಶಿವಮೊಗ್ಗ 7 ವಿಕೆಟ್‌ಗಳಿಗೆ 149 ರನ್‌ ಗಳಿಸಿದರೆ, ಟೈಗರ್ಸ್‌ ತಂಡ ಇನ್ನೂ ಆರು ಓವರ್‌ಗಳು ಇರುವಂತೆಯೇ ಎರಡು ವಿಕೆಟ್‌ ಕಳೆದುಕೊಂಡು ಗೆಲುವಿನ ಗಡಿ ದಾಟಿತು. ಅರ್ಧಶತಕ ಗಳಿಸಿದ ಮೊಹಮ್ಮದ್‌ ತಾಹಾ (69; 38 ಎ., 4X1, 6X8) ಮತ್ತು ಕೆ.ಶ್ರೀಜಿತ್ (ಔಟಾಗದೆ 61; 39 ಎ., 4X7, 6X2) ಅವರು ಹುಬ್ಬಳ್ಳಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಸಂಕ್ಷಿಪ್ತ ಸ್ಕೋರ್‌: ಶಿವಮೊಗ್ಗ ಲಯನ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 149 (ರೋಹನ್‌ ಕದಂ 54, ಎಚ್‌.ಎಸ್‌.ಶರತ್‌ 18, ಲವೀಶ್‌ ಕೌಶಲ್‌ 32ಕ್ಕೆ 2, ಮನ್ವಂತ್‌ ಕುಮಾರ್ 29ಕ್ಕೆ 2) ಹುಬ್ಬಳ್ಳಿ ಟೈಗರ್ಸ್‌ 14 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 153 (ಮೊಹಮ್ಮದ್‌ ತಾಹಾ 69, ಕೆ.ಶ್ರೀಜಿತ್‌ ಔಟಾಗದೆ 61, ವಾಸುಕಿ ಕೌಶಿಕ್‌ 17ಕ್ಕೆ 1) ಫಲಿತಾಂಶ: ಹುಬ್ಬಳ್ಳಿ ಟೈಗರ್ಸ್‌ಗೆ 8 ವಿಕೆಟ್‌ ಗೆಲುವು ಮೈಸೂರು ವಾರಿಯರ್ಸ್: 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 248 (ಎಸ್‌.ಯು.ಕಾರ್ತಿಕ್ 41, ಆರ್‌.ಸಮರ್ಥ್‌ 80, ಕರುಣ್‌ ನಾಯರ್‌ ಔಟಾಗದೆ 107, ಮನೋಜ್‌ ಭಾಂಡಗೆ ಔಟಾಗದೆ 18) ಗುಲ್ಬರ್ಗ ಮಿಸ್ಟಿಕ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 212 (ಮೆಕ್‌ನೀಲ್‌ ನೊರೋನಾ 61, ಅಬುಲ್‌ ಹಸನ್‌ ಖಾಲಿದ್ 54, ಜೆ.ಸುಚಿತ್‌ 26ಕ್ಕೆ 2, ಮೋನಿಶ್‌ ರೆಡ್ಡಿ 42ಕ್ಕೆ 2) ಫಲಿತಾಂಶ: ಮೈಸೂರು ವಾರಿಯರ್ಸ್‌ಗೆ 36 ರನ್‌ ಜಯ ಫೈನಲ್‌ ಪಂದ್ಯ ಹುಬ್ಬಳ್ಳಿ ಟೈಗರ್ಸ್‌– ಮೈಸೂರು ವಾರಿಯರ್ಸ್‌ (ಆರಂಭ: ಮಧ್ಯಾಹ್ನ 1) ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌ ಕನ್ನಡ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.