ಅಂತರ ಶಾಲಾ 2ನೇ ಡಿವಿಷನ್‌ ಕ್ರಿಕೆಟ್‌ ಟೂರ್ನಿ: ನವನೀತ್‌ ತ್ರಿಶತಕ ಸಂಭ್ರಮ ಬೆಂಗಳೂರು: ನವನೀತ್‌ ವಿ. ರಾಜ್‌ ಅವರ ತ್ರಿಶತಕದ ನೆರವಿನಿಂದ ಶ್ರೀವಾಣಿ ಎಜುಕೇಷನಲ್‌ ಸೆಂಟರ್‌ ಟ್ರಸ್ಟ್‌ ತಂಡವು ಕೆಎಸ್‌ಸಿಎ 16 ವರ್ಷದೊಳಗಿನವರ ಅಂತರ ಶಾಲಾ 2ನೇ ಡಿವಿಷನ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 427 ರನ್‌ಗಳಿಂದ ಹೋಲಿ ಕ್ರಾಸ್‌ ಸ್ಕೂಲ್‌ ತಂಡವನ್ನು ಮಣಿಸಿತು. ಸೋಮವಾರ ನಡೆದ ಪಂದ್ಯದಲ್ಲಿ ಶ್ರೀವಾಣಿ ಎಜುಕೇಷನಲ್‌ ಸೆಂಟರ್‌ ಟ್ರಸ್ಟ್‌ ತಂಡ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 481 ರನ್‌ ಗಳಿಸಿತು. ನವನೀತ್‌ 186 ಎಸೆತಗಳಲ್ಲಿ 44 ಬೌಂಡರಿ, 7 ಸಿಕ್ಸರ್‌ಗಳ ನೆರವಿನಿಂದ 306 ರನ್‌ ಕಲೆ ಹಾಕಿದರು. ಹೋಲಿ ಕ್ರಾಸ್‌ ಸ್ಕೂಲ್‌ ತಂಡವು 13.5 ಓವರ್‌ಗಳಲ್ಲಿ 54 ರನ್‌ಗೆ ಆಲೌಟ್‌ ಆಯಿತು. ಬೌಲಿಂಗ್‌ನಲ್ಲೂ ಮಿಂಚಿದ ನವನೀತ್‌ 24 ರನ್‌ಗೆ 5 ವಿಕೆಟ್‌ ಪಡೆದರು. ಅದೇ ತಂಡದ ಧ್ರುವ ರಾವ್ 30 ರನ್‌ಗೆ 5 ವಿಕೆಟ್‌ ಗಳಿಸಿ ಗಮನ ಸೆಳೆದರು. ಇತರ ಪಂದ್ಯಗಳಲ್ಲಿ ಫ್ರಾಂಕ್ ಆಂಥೋನಿ ಪಬ್ಲಿಕ್ ಸ್ಕೂಲ್ ತಂಡವು ಶ್ರೀಸ್ವಾಮಿನಾರಾಯಣ ಗುರುಕುಲ ಇಂಟರ್‌ನ್ಯಾಷನಲ್‌ ತಂಡವನ್ನು, ಚಿನ್ಮಯ ವಿದ್ಯಾಲಯ ತಂಡವು ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ ತಂಡವನ್ನು, ಶ್ರೀಕುಮಾರನ್‌ ಪಬ್ಲಿಕ್‌ ಸ್ಕೂಲ್‌ (ಐಸಿಎಸ್‌ಇ)ತಂಡವು ಸೇಂಟ್‌ ಪೌಲ್‌ ಇಂಗ್ಲಿಷ್‌ ಸ್ಕೂಲ್‌ ತಂಡವನ್ನು, ಆರ್ಮಿ ಪಬ್ಲಿಕ್‌ ಸ್ಕೂಲ್‌ ತಂಡವು ದಿ ರೆಸಿಡೆನ್ಸಿ ಪಬ್ಲಿಕ್‌ ಸ್ಕೂಲ್‌ ತಂಡವನ್ನು, ಕಾರ್ಮೆಲ್‌ ಹೈಸ್ಕೂಲ್‌ ತಂಡವು ಸುದರ್ಶನ್‌ ವಿದ್ಯಾಮಂದಿರ್‌ (ಐಸಿಎಸ್‌ಇ) ತಂಡವನ್ನು ಪರಾಭವಗೊಳಿಸಿದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.