ಮಹಾರಾಜ ಟ್ರೋಫಿ ಕ್ರಿಕೆಟ್: ಮೈಸೂರು ವಾರಿಯರ್ಸ್‌ ಜಯಭೇರಿ ಬೆಂಗಳೂರು: ಮೊನೀಷ್ ರೆಡ್ಡಿ ಅವರ ಉತ್ತಮ ಬೌಲಿಂಗ್ ಮತ್ತು ಕೆ.ಎಸ್. ಲಂಕೇಶ್ ಅಜೇಯ ಅರ್ಧಶತಕದ ಬಲದಿಂದ ಮೈಸೂರು ವಾರಿಯರ್ಸ್ ತಂಡವು ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಜಯಿಸಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೈಸೂರು ತಂಡವು 7 ವಿಕೆಟ್‌ಗಳಿಂದ ಮಂಗಳೂರು ಡ್ರ್ಯಾಗನ್ಸ್ ವಿರುದ್ಧ ಜಯಿಸಿತು. ಟಾಸ್ ಗೆದ್ದ ಮೈಸೂರು ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಬ್ಯಾಟರ್ ರೋಹನ್ ಪಾಟೀಲ (52; 42ಎ, 4X2, 6X3) ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 140 ರನ್‌ ಗಳಿಸಿತು. ಮೈಸೂರು ತಂಡದ ಮೋನಿಷ್ ರೆಡ್ಡಿ ಮೂರು ವಿಕೆಟ್ ಗಳಿಸಿ ಮಂಗಳೂರು ತಂಡವು ದೊಡ್ಡ ಮೊತ್ತ ಗಳಿಸದಂತೆ ತಡೆದರು. ಸಾಧಾರಣ ಗುರಿ ಬೆನ್ನಟ್ಟಿದ ಮೈಸೂರು ತಂಡವು ಆರಂಭದಲ್ಲಿ ಎಡವಿತು. ಆರಂಭಿಕ ಜೋಡಿ ಆರ್. ಸಮರ್ಥ್ (6 ರನ್) ಮತ್ತು ಭರತ್ ದೂರಿ (10 ರನ್) ಬೇಗನೇ ಔಟಾದರು. ಈ ಹಂತದಲ್ಲಿ ನಾಯಕ ಕರುಣ್ ನಾಯರ್ (43; 25ಎ) ಮತ್ತು ಲೋಕೇಶ್ (ಅಜೇಯ 68; 45ಎ) ತಂಡದ ಗೆಲುವಿಗೆ ಬಲ ತುಂಬಿದರು. ಲೋಕೇಶ್ ಆರು ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಬಾರಿಸಿದರು. ತಂಡವು 16.3 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 141 ರನ್ ಗಳಿಸಿ ಜಯಿಸಿತು. ಪಾಯಿಂಟ್ ಪಟ್ಟಿಯಲ್ಲಿ ಮೈಸೂರು ತಂಡವು ಹತ್ತು ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೇರಿತು. ಹುಬ್ಬಳ್ಳಿ ಟೈಗರ್ಸ್ 12 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಸಂಕ್ಷಿಪ್ತ ಸ್ಕೋರು: ಹುಬ್ಬಳ್ಳಿ ಟೈಗರ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 164 (ಕೃಷ್ಣನ್ ಶ್ರೀಜಿತ್ 65, ಮನೀಷ್ ಪಾಂಡೆ ಔಟಾಗದೆ 48, ಮಿಚೆಲ್ ನರೋನಾ 15ಕ್ಕೆ2) ಗುಲ್ಬರ್ಗ ಮಿಸ್ಟಿಕ್ಸ್: 18.4 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 166 (ಮೆಕ್‌ನಿಲ್ ಹ್ಯಾಡ್ಲಿ ನರೋನಾ ಔಟಾಗದೆ 65, ಆರ್. ಸ್ಮರಣ್ 56, ವಿದ್ವತ್ ಕಾವೇರಪ್ಪ 32ಕ್ಕೆ1) ಫಲಿತಾಂಶ: ಗುಲ್ಬರ್ಗ ಮಿಸ್ಟಿಕ್ಸ್‌ಗೆ 7 ವಿಕೆಟ್‌ಗಳ ಜಯ. ಮಂಗಳೂರು ಡ್ರ್ಯಾಗನ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 140 (ರೋಹನ್ ಪಾಟೀಲ 52, ಕೆ. ಗೌತಮ್ 15, ಮೊನಿಷ್ ರೆಡ್ಡಿ 42ಕ್ಕೆ3, ಜೆ. ಸುಚಿತ್ 24ಕ್ಕೆ2) ಮೈಸೂರು ವಾರಿಯರ್ಸ್: 16.3 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 141 (ಕರುಣ್ ನಾಯರ್ 43, ಕೆ.ಎಸ್. ಲಂಕೇಶ್ ಔಟಾಗದೆ 68, ಪಾರಸ್ ಗುರುಬಕ್ಷ್ ಆರ್ಯ 35ಕ್ಕೆ1) ಫಲಿತಾಂಶ: ಮೈಸೂರು ವಾರಿಯರ್ಸ್‌ ತಂಡಕ್ಕೆ 7 ವಿಕೆಟ್‌ಗಳ ಜಯ. ಇಂದಿನ ಪಂದ್ಯಗಳು ಶಿವಮೊಗ್ಗ ಲಯನ್ಸ್–ಮಂಗಳೂರು ಡ್ರ್ಯಾಗನ್ಸ್ (ಮಧ್ಯಾಹ್ನ 1) ಬೆಂಗಳೂರು ಬ್ಲಾಸ್ಟರ್ಸ್–ಗುಲ್ಬರ್ಗ ಮಿಸ್ಟಿಕ್ಸ್ (ಸಂಜೆ 5.30) ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಕನ್ನಡ, ಫ್ಯಾನ್‌ಕೋಡ್ ಆ್ಯಪ್. - - ನರೋನಾ ಸ್ಮರಣ್ ಜೊತೆಯಾಟಕ್ಕೆ ಜಯ ಮೆಕ್‌ನಿಲ್ ಹ್ಯಾಡ್ಲಿ ನರೋನಾ (ಔಟಾಗದೆ 65; 50ಎ) ಮತ್ತು ಆರ್. ಸ್ಮರಣ್ (56; 38ಎ) ಅವರ ಶತಕದ ಜೊತೆಯಾಟದಿಂದ ಗುಲ್ಬರ್ಗ ಮಿಸ್ಟಿಕ್ಸ್ ತಂಡವು 7 ವಿಕೆಟ್‌ಗಳಿಂದ ಹುಬ್ಬಳ್ಳಿ ಟೈಗರ್ಸ್ ಎದುರು ಜಯಿಸಿತು. ಟಾಸ್ ಗೆದ್ದ ಗುಲ್ಬರ್ಗ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹುಬ್ಬಳ್ಳಿ ತಂಡವು ಕೃಷ್ಣನ್ ಶ್ರೀಜಿತ್ (65; 38ಎ) ಮತ್ತು ನಾಯಕ ಮನೀಷ್ ಪಾಂಡೆ (ಔಟಾಗದೆ 48; 32ಎ) ಅವರಿಬ್ಬರ ಚೆಂದದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 164 ರನ್ ಗಳಿಸಿತು. ಇದಕ್ಕುತ್ತರವಾಗಿ ಗುಲ್ಬರ್ಗ ತಂಡವು 18.4 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 165 ರನ್ ಗಳಿಸಿತು. ಮೆಕ್‌ನಿಲ್ ಮತ್ತು ಸ್ಮರಣ್ ಅವರು ಮೂರನೇ ವಿಕೆಟ್‌ ಜೊತೆಯಾಟದಲ್ಲಿ 110 ರನ್‌ ಸೇರಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.