3rd T20: ಕ್ಲೀನ್‌ಸ್ವೀಪ್ ಗೆಲುವಿನ ಮೇಲೆ ಬೂಮ್ರಾ ಕಣ್ಣು ಡಬ್ಲಿನ್: ಜಸ್‌ಪ್ರೀತ್ ಬೂಮ್ರಾ ನಾಯಕತ್ವದ ಬಳಗವು ಐರ್ಲೆಂಡ್ ಎದುರಿನ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧಿಸುವ ವಿಶ್ವಾಸದಲ್ಲಿದೆ. ಮೂರು ಪಂದ್ಯಗಳ ಸರಣಿಯಲ್ಲಿ 2–0ಯಿಂದ ಮುನ್ನಡೆಯಲ್ಲಿ ಇರುವ ಭಾರತ ಬುಧವಾರ ಕೊನೆಯ ಹಣಾಹಣಿಯಲ್ಲಿ ಐರ್ಲೆಂಡ್ ಪಡೆಯನ್ನು ಎದುರಿಸಲಿದೆ. ಗಾಯದಿಂದಾಗಿ ಸುಮಾರು ಹನ್ನೊಂದು ತಿಂಗಳು ಆಟದಿಂದ ದೂರವಿದ್ದ ಬೂಮ್ರಾ ಮರಳಿರುವ ಸರಣಿ ಇದು. ಕಳೆದ ಎರಡೂ ಪಂದ್ಯಗಳಲ್ಲಿ ಅವರು ಉತ್ತಮ ಬೌಲಿಂಗ್‌ನಿಂದ ಗಮನ ಸೆಳೆದಿದ್ದಾರೆ. ಆದರೆ ತಮ್ಮ ಎಂದಿನ ರನ್‌ ಅಪ್‌ಗೆ ಮರಳುವ ಅಗತ್ಯವಿದೆ. ವೇಗ ಹೆಚ್ಚಿಸಿಕೊಳ್ಳುವ ಸವಾಲೂ ಅವರ ಮುಂದಿದೆ. ಅಲ್ಲದೇ ಕೊನೆಯ ಪಂದ್ಯದಲ್ಲಿ ತಮ್ಮ ತಂಡದಲ್ಲಿರುವ ಯುವಪ್ರತಿಭೆಗಳಿಗೆ ಅವಕಾಶ ನೀಡಿ ಪರೀಕ್ಷಿಸಬೇಕಿದೆ. ಬೂಮ್ರಾ ಮತ್ತು ಕನ್ನಡಿಗ ಪ್ರಸಿದ್ಧ ಕೃಷ್ಣ ಅವರು ದೀರ್ಘ ಸಮಯದಿಂದ ಪಂದ್ಯಗಳನ್ನು ಆಡಿರಲಿಲ್ಲ. ಆದ್ದರಿಂದ ಈಗ ಅವರು ವಿಶ್ರಾಂತಿ ಪಡೆಯುವುದಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಆಡಿ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕಿದೆ. ಮುಂಬರುವ ಏಷ್ಯಾಕಪ್ ಮತ್ತು ವಿಶ್ವಕಪ್ ಟೂರ್ನಿಗಳಿಗೆ ಸಿದ್ಧರಾಗಬೇಕಿದೆ. ಆದ್ದರಿಂದ ಅವರು ಆಡುವುದು ಬಹುತೇಕ ಖಚಿತ. ಇನ್ನುಳಿದಂತೆ ಬೌಲರ್‌ಗಳಾದ ಆವೇಶ್ ಖಾನ್, ಆಲ್‌ರೌಂಡರ್ ಶಹಬಾಜ್ ಅಹಮದ್ ಮತ್ತು ವಿಕೆಟ್‌ಕೀಪರ್ ಜಿತೇಶ್ ಶರ್ಮಾ ಅವರು ಅವಕಾಶಕ್ಕಾಗಿ ಕಾದಿದ್ಧಾರೆ. ಸಂಜು ಸ್ಯಾಮ್ಸನ್‌ಗೆ ವಿಶ್ರಾಂತಿ ನೀಡಿ ಶರ್ಮಾ ಅವರನ್ನು ಕಣಕ್ಕಿಳಿಸಬಹುದು. ಈಚೆಗೆ ನಡೆದಿದ್ದ ವೆಸ್ಟ್ ಇಂಡೀಸ್ ಎದುರಿನ ಸರಣಿಯಲ್ಲಿಯೂ ಆವೇಶ್ ಇದ್ದರು. ಆದರೆ ಆಡುವ ಬಳಗದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಕಳೆದ ಏಳು ಪಂದ್ಯಗಳಿಂದ ಅವರು ಬೆಂಚ್‌ನಲ್ಲಿದ್ದಾರೆ. ಆವೇಶ್ ಏಷ್ಯನ್ ಕ್ರೀಡಾಕೂಟದಲ್ಲಿ ಆಡಲಿರುವ ಭಾರತ ತಂಡದಲ್ಲಿದ್ದಾರೆ.‌ ಯುವಪ್ರತಿಭೆ ರಿಂಕು ಸಿಂಗ್, ಯಶಸ್ವಿ ಜೈಸ್ವಾಲ್ ಹಾಗೂ ಋತುರಾಜ್ ಗಾಯಕವಾಡ ಅವರು 11ರ ಬಳಗದಲ್ಲಿ ಸ್ಥಾನ ಗಳಿಸುವುದು ಬಹುತೇಕ ಖಚಿತ. ಪಾಲ್ ಸ್ಟರ್ಲಿಂಗ್ ನಾಯಕತ್ವದ ಐರ್ಲೆಂಡ್ ಆತಿಥೇಯ ತಂಡಕ್ಕೆ ಕೊನೆಯ ಪಂದ್ಯದಲ್ಲಿ ಸಮಾಧಾನಕರ ಗೆಲುವು ಸಾಧಿಸುವ ಹಂಬಲವಿದೆ. ಆದರೆ, ಎಲ್ಲ ವಿಭಾಗಗಳಲ್ಲಿಯೂ ಸಂಘಟಿತ ಯೋಜನೆಯೊಂದಿಗೆ ಆಡಬೇಕಾದ ಸವಾಲು ಇದೆ. ಆರಂಭಿಕ ಬ್ಯಾಟರ್ ಆ್ಯಂಡ್ರ್ಯೂ ಬಲ್ಬಿರ್ನಿ ಮತ್ತು ಬ್ಯಾರಿ ಮೆಕಾರ್ಥಿ ಅವರಿಬ್ಬರನ್ನು ಬಿಟ್ಟರೆ ಉಳಿದವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಬೇಕಿದೆ. ಪಂದ್ಯ ಆರಂಭ: ರಾತ್ರಿ 7.30 ನೇರಪ್ರಸಾರ: ಸ್ಪೋರ್ಟ್ಸ್ 18 ಮತ್ತು ಜಿಯೊ ಸಿನೆಮಾ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.