ಏಷ್ಯಾ ಕಪ್ ಕ್ರಿಕೆಟ್: ಯೋ ಯೋ ಟೆಸ್ಟ್‌ನಲ್ಲಿ ವಿರಾಟ್ ಕಿಂಗ್ ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಬ್ಯಾಟರ್ ವಿರಾಟ್ ಕೊಹ್ಲಿ ಯೋ ಯೋ ಫಿಟ್‌ನೆಸ್‌ ಟೆಸ್ಟ್‌ನಲ್ಲಿ ಅತಿ ಹೆಚ್ಚು ಅಂಕ ಪಡೆದಿದ್ದಾರೆ. ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡದ ಆಟಗಾರರಿಗೆ ಗುರುವಾರ ಆಲೂರಿನಲ್ಲಿರುವ ಕೆಎಸ್‌ಸಿಎ ಕ್ರಿಕೆಟ್‌ ಮೈದಾನದಲ್ಲಿ ನಡೆದ ಯೋ ಯೋ ಟೆಸ್ಟ್‌ನಲ್ಲಿ ವಿರಾಟ್ 17.2 ಅಂಕಗಳನ್ನು ಗಳಿಸಿದರು. ಅವರು ಬಿಸಿಸಿಐ ನಿಗದಿ ಮಾಡಿರುವ ಅರ್ಹತಾ ಮಟ್ಟವನ್ನು (16.5 ಅಂಕ) ಮೀರಿನಿಲ್ಲುವಲ್ಲಿ ಯಶಸ್ವಿಯಾದರು ಎಂದು ಮೂಲಗಳು ತಿಳಿಸಿವೆ. ಆರು ದಿನಗಳವರೆಗೆ ಇಲ್ಲಿ ಆರೋಗ್ಯ, ಫಿಟ್‌ನೆಸ್ ಮತ್ತು ಕೌಶಲ ಪರೀಕ್ಷಾ ಶಿಬಿರ ನಡೆಯಲಿದೆ. ಈ ಪರೀಕ್ಷೆಯಲ್ಲಿ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಹಾರ್ದಿಕ್ ಪಾಂಡ್ಯ ಕೂಡ ಭಾಗವಹಿಸಿದ್ದರು. ‘ಪರೀಕ್ಷೆಯನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಬಿಸಿಸಿಐಗೆ ವರದಿಯನ್ನು ಶೀಘ್ರದಲ್ಲಿ ಸಲ್ಲಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ. ಐರ್ಲೆಂಡ್‌ನಲ್ಲಿ ನಡೆದ ಟಿ20 ಕ್ರಿಕೆಟ್ ಸರಣಿಯಲ್ಲಿ ಆಡಿದ ಜಸ್‌ಪ್ರೀತ್ ಬೂಮ್ರಾ, ಪ್ರಸಿದ್ಧಕೃಷ್ಣ, ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಶುಕ್ರವಾರ ಬೆಂಗಳೂರಿಗೆ ಮರಳುತ್ತಿದ್ದಾರೆ. ಅವರಿಗೆ ಯೋ ಯೋ ಟೆಸ್ಟ್‌ ಬದಲು ಕೌಶಲ ಟೆಸ್ಟ್‌ ನೀಡಬೇಕಿದೆ. ಈ ಶಿಬಿರದಲ್ಲಿ ಎಲ್ಲ ಆಟಗಾರರ ಆರೋಗ್ಯ ತಪಾಸಣೆಯನ್ನೂ ಮಾಡಲಾಗುತ್ತಿದೆ. ಲಿಪಿಡ್ ಪ್ರೊಫೈಲ್, ರಕ್ತದಲ್ಲಿ ಸಕ್ಕರೆ ಪ್ರಮಾಣ (ಊಟದ ಮುನ್ನ ಮತ್ತು ನಂತರ) ಯೂರಿಕ್ ಆಮ್ಲ, ಕ್ಯಾಲ್ಸಿಯಂ, ವಿಟಮಿನ್ ಬಿ12 ಮತ್ತು ಡಿ, ಕ್ರಿಯೆಟಿನೈನ್, ಟೆಸ್ಟೊಸ್ಟೆರಾನ್ ಮತ್ತು ಡೆಕ್ಸಾ ಟೆಸ್ಟ್‌ಗಳನ್ನು ಮಾಡಲಾಗುತ್ತಿದೆ. ಗಾಯದಿಂದಾಗಿ ದೀರ್ಘ ಕಾಲದಿಂದ ಆಟದಂಗಳದಿಂದ ಹೊರಗುಳಿದಿರುವ ಕೆ.ಎಲ್. ರಾಹುಲ್ ಅವರ ದೈಹಿಕ ಸಾಮರ್ಥ್ಯದ ಬಗ್ಗೆ ಬಿಸಿಸಿಐ ಹೆಚ್ಚು ನಿಗಾ ವಹಿಸಿದೆ. ಗಾಯದಿಂದ ಚೇತರಿಸಿಕೊಂಡಿರುವ ಅವರನ್ನು ಏಷ್ಯಾ ಕಪ್ ಟೂರ್ನಿಯಲ್ಲಿ ಆಡುವ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಅವರಿಗೆ ಮತ್ತೆ ಸಣ್ಣಪ್ರಮಾಣದ ಗಾಯದ ಸಮಸ್ಯೆ ಕಾಣಿಸಿಕೊಂಡಿತ್ತು. ಆದರೆ ಹಳೆಯ ಗಾಯದ ಸಮಸ್ಯೆಗೆ ಅದು ಸಂಬಂಧಿಸಿದ್ದಾಗಿರಲಿಲ್ಲ. ಒಂದೊಮ್ಮೆ ರಾಹುಲ್ ಫಿಟ್‌ ಆಗದಿದ್ದರೆ ವಿಕೆಟ್‌ಕೀಪರ್ ಸಂಜು ಸ್ಯಾಮ್ಸನ್ ಅವಕಾಶ ಪಡೆಯುವ ಸಾಧ್ಯತೆ ಇದೆ. ಆದರೆ ರಾಹುಲ್ ಬ್ಯಾಟಿಂಗ್ ಕೌಶಲ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದಾರೆಂದು ಎನ್‌ಸಿಎ ಮೂಲಗಳು ತಿಳಿಸಿವೆ. ಇದೇ 29ರಂದು ಈ ಶಿಬಿರವು ಮುಕ್ತಾಯವಾಗಲಿದೆ. 30ರಂದು ತಂಡವು ಕೊಲಂಬೊಗೆ ತೆರಳುವ ಸಾಧ್ಯತೆ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.