ಭಾರತ–ಐರ್ಲೆಂಡ್ ಪಂದ್ಯಕ್ಕೆ ಮಳೆ ಅಡ್ಡಿ: ಚಂದ್ರಯಾನ ಕಣ್ತುಂಬಿಕೊಂಡ ಕ್ರಿಕೆಟಿಗರು ನವದೆಹಲಿ: ಡಬ್ಲಿನ್ ಅಂಗಳದಲ್ಲಿ ಐರ್ಲೆಂಡ್ ಎದುರಿನ ಟಿ20 ಕ್ರಿಕೆಟ್ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಗೆಲುವು ದಾಖಲಿಸುವ ಭಾರತದ ಆಸೆಗೆ ಮಳೆ ಅಡ್ಡಿಯಾಯಿತು. ಆದರೆ ಭಾರತದ ಚಂದ್ರಯಾನದ ಐತಿಹಾಸಿಕ ಸಾಧನೆಯನ್ನು ಕಣ್ತುಂಬಿಕೊಂಡ ಜಸ್‌ಪ್ರೀತ್ ಬೂಮ್ರಾ ಬಳಗ ಸಂಭ್ರಮಿಸಿತು. ‘ಚಾರಿತ್ರಿಕ ಕ್ಷಣಕ್ಕೆ ಡಬ್ಲಿನ್‌ನಿಂದ ಸಾಕ್ಷಿಯಾಗುತ್ತಿದ್ದೇವೆ. ಚಂದ್ರನ ದಕ್ಷಿಣ ಧ್ರುವಕ್ಕೆ ಭಾರತದ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಇಳಿಯಿತು‘ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಎಕ್ಸ್‌ (ಟ್ವಿಟರ್) ಖಾತೆಯಲ್ಲಿ ಸಂದೇಶ ಹಾಕಿತು. ಬೂಮ್ರಾ ಬಳಗವು ಟೆಲಿವಿಷನ್ ಮುಂದೆ ನಿಂತು ಚಂದ್ರಯಾನದ ನೇರಪ್ರಸಾರವನ್ನು ವೀಕ್ಷಿಸಿತು. ಐತಿಹಾಸಿಕ ಸಾಧನೆ ದಾಖಲಾದ ಕೂಡಲೇ ಪರಸ್ಪರ ಆಲಂಗಿಸಿಕೊಂಡ ಆಟಗಾರರು ಸಂಭ್ರಮಿಸಿದರು. ಶುಭಾಶಯ ವಿನಿಯಯ ಮಾಡಿಕೊಂಡರು. ಕ್ರಿಕೆಟಿಗರ ಶುಭಾಶಯ: ಚಂದ್ರಯಾನದ ಯಶಸ್ಸನ್ನು ಕ್ರಿಕೆಟ್‌ ದಿಗ್ಗಜರು ಗುಣಗಾನ ಮಾಡಿದ್ದಾರೆ. ‘ಇಸ್ರೊ ಭವ್ಯ ಭಾರತದ ರಾಯಭಾರಿ. ಪರಿಶ್ರಮಿಗಳು, ವಿನಯವಂತ ಮಹಿಳಾ ಮತ್ತು ಪುರುಷರ ತಂಡವು ಕಠಿಣ ಸವಾಲುಗಳನ್ನು ಮೀರಿ ನಿಂತರು. ಭಾರತದ ತ್ರಿವರ್ಣ ಧ್ವಜವು ಹೆಮ್ಮೆಯಿಂದ ನಲಿಯುವಂತೆ ಮಾಡಿದರು. ಚಂದ್ರಯಾನ –2ರ ವಿಜ್ಞಾನಿಗಳ ತಂಡದ ಮುಖ್ಯಸ್ಥರಾಗಿದ್ದ ಕೆ. ಶಿವನ್ ಮತ್ತು ಈಗಿನ ಚಂದ್ರಯಾನ–3ರ ಮುಖ್ಯಸ್ಥ ಎಸ್. ಸೋಮನಾಥ್ ಅವರ ತಂಡಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಬೇಕು. ಅವರ ಯಶಸ್ಸನ್ನು ಎಲ್ಲರೂ ಸಂಭ್ರಮಿಸುವ ಸಮಯ ಇದು‘ ಎಂದು ದಿಗ್ಗಜ ಸಚಿನ್ ತೆಂಡೂಲ್ಕರ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ‘ಚಂದ್ರಯಾನ ಮೂರರ ತಂಡಕ್ಕೆ ಶುಭಾಶಯಗಳು. ಇಡೀ ದೇಶವೇ ಹೆಮ್ಮೆಪಡುವಂತಹ ಕಾರ್ಯ ಮಾಡಿದ್ದಾರೆ. ಜೈ ಹಿಂದ್‘ ಎಂದು ಭಾರತ ತಂಡದ ಆಟಗಾರ ವಿರಾಟ್ ಕೊಹ್ಲಿ ಸಂದೇಶ ಹಾಕಿದ್ದಾರೆ. ‘ನಾವು ಈಗ ಇತಿಹಾಸ ರಚಿಸಿದ್ದೇವೆ. ಇಸ್ರೋಗೆ ಶುಭಾಶಯಗಳು. ಇದೊಂದು ಅಮೂಲ್ಯವಾದ ಕ್ಷಣ. ಭಾರತ ಮಾತಾ ಕೀ ಜೈ‘ ಎಂದು ಕನ್ನಡಿಗ, ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ‘ಸೂರ್ಯಾಸ್ತದತ್ತ ಸಾಗಿದ ಹೊತ್ತಿನಲ್ಲಿ ಚಂದ್ರದ ದಕ್ಷಿಣ ಧ್ರುವದಲ್ಲಿ ನಾವು ಅಸ್ತ. ಇದೊಂದು ಸುಂದರ ಕ್ಷಣ. ಪ್ರತಿಯೊಂದು ಹಿನ್ನಡೆಯ ನಂತರದಲ್ಲಿ ಯಶೋಗಾಥೆ ಇರುತ್ತದೆ ಎಂಬುದ ಮತ್ತೊಮ್ಮೆ ಸಾಬೀತಾಯಿತು‘ ಎಂದು ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. ಮಾಜಿ ಆಟಗಾರ ಅನಿಲ್‌ ಕುಂಬ್ಳೆ, ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಅವರು ಶುಭಾಶಯ ಕೋರಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.