ವಿಶ್ವಕಪ್‌: ದಕ್ಷಿಣ ಆಫ್ರಿಕಾದ ದಾಖಲೆಗಳ ಸಾಲು ನವದೆಹಲಿ (ಪಿಟಿಐ): ಶನಿವಾರ ರಾತ್ರಿ ಮಳೆ ಸುರಿಯಲಿಲ್ಲ. ಆದರೆ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ರನ್‌ಗಳ ಹೊಳೆಯೇ ಹರಿಯಿತು. ಇಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ರನ್‌ಗಳ ಬೆಟ್ಟದ ಜೊತೆಗೆ ಸಾಲು ಸಾಲು ದಾಖಲೆಗಳನ್ನೂ ತನ್ನ ಹೆಸರಿಗೆ ನಿರ್ಮಿಸಿತು. ಶ್ರೀಲಂಕಾ ತಂಡವನ್ನು 102 ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಒಟ್ಟು 754 ರನ್‌ಗಳು ದಾಖಲಾದವು! ಟಾಸ್ ಶ್ರೀಲಂಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ (100; 84ಎ, 4X12, 6X3), ರೆಸಿ ವ್ಯಾನ್ ಡೆರ್ ಡಸೆ (108; 110ಎ, 4X13, 6X2) ಹಾಗೂ ಏಡನ್ ಮರ್ಕರಂ (106; 54ಎ, 4X14, 6X3) ಶತಕ ಬಾರಿಸಿದರು. ಇದರೊಂದಿಗೆ ದಕ್ಷಿಣ ಆಫ್ರಿಕಾ ತಂಡವು 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 428 ರನ್‌ ಗಳಿಸಿತು. ಮರ್ಕರಂ ವಿಶ್ವಕಪ್ ಟೂರ್ನಿಯ ಅತಿ ವೇಗದ ಶತಕ ದಾಖಲಿಸಿದರು. ಗುರಿ ಬೆನ್ನಟ್ಟಿದ ಶ್ರೀಲಂಕಾ ಸುಲಭವಾಗಿ ಶರಣಾಗಲಿಲ್ಲ. ಆರಂಭಿಕರು ಬೇಗನೇ ಕುಸಿದರೂ ಕುಶಾಲ ಮೆಂಡಿಸ್ (76; 42ಎ), ಚರಿತ ಅಸಲಂಕಾ (79; 66ಎ) ಮತ್ತು ದಸುನ್ ಶನಕಾ (68; 62ಎ) ಅರ್ಧಶತಕಗಳನ್ನು ಬಾರಿಸಿದರು. 44.5 ಓವರ್‌ಗಳಲ್ಲಿ 326 ರನ್‌ ಗಳಿಸಿದ ತಂಡವು ಆಲೌಟ್ ಆಯಿತು. ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ: 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 428 (ಕ್ವಿಂಟನ್ ಡಿ ಕಾಕ್ 100, ರೆಸಿ ವ್ಯಾನ್‌ ಡೆರ್ ಡಸೆನ್ 108, ಏಡನ್ ಮರ್ಕರಂ 106, ಹೆನ್ರಿಚ್ ಕ್ಲಾಸೆನ್ 32, ಡೇವಿಡ್ ಮಿಲ್ಲರ್ ಔಟಾಗದೆ 39, ದಿಲ್ಶಾನ್ ಮಧುಶಂಕಾ 86ಕ್ಕೆ2) ಶ್ರೀಲಂಕಾ: 44.5 ಓವರ್‌ಗಳಲ್ಲಿ 328 (ಕುಶಾಲ ಮೆಂಡಿಸ್ 76, ಸದೀರಾ ಸಮರವಿಕ್ರಂ 23, ಚರಿತ ಅಸಲಂಕಾ 79, ದಸುನ್ ಶನಕಾ 68, ಕಸುನ್ ರಜಿತಾ 33, ಮಾರ್ಕೊ ಜಿನ್ಸೆನ್ 92ಕ್ಕೆ2, ಕಗಿಸೊ ರಬಾಡ 50ಕ್ಕೆ2, ಕೇಶವ್ ಮಹಾರಾಜ್ 62ಕ್ಕೆ2, ಗೆರಾಲ್ಡ್ ಕೊಜಿ 68ಕ್ಕೆ3) ಫಲಿತಾಂಶ: ದಕ್ಷಿಣ ಆಫ್ರಿಕಾ ತಂಡಕ್ಕೆ 102 ರನ್‌ಗಳ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.