ಪಾಕಿಸ್ತಾನ– ನ್ಯೂಜಿಲೆಂಡ್‌ ಮೊದಲ ಏಕದಿನ ಸೋಮವಾರ ಕರಾಚಿ: ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ತಂಡಗಳು ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಸೋಮವಾರ ಎದುರಾಗಲಿದ್ದು, ಶುಭಾರಂಭದ ನಿರೀಕ್ಷೆಯಲ್ಲಿವೆ. ಟೆಸ್ಟ್‌ ಸರಣಿಯ ಎರಡೂ ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿದ್ದವು. ಏಕದಿನ ಸರಣಿ ಗೆಲ್ಲುವ ಲೆಕ್ಕಾಚಾರವನ್ನು ಉಭಯ ತಂಡಗಳು ಹಾಕಿಕೊಂಡಿವೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಶ್ವಕಪ್‌ ಟೂರ್ನಿಗೆ ಸಿದ್ಧತೆಯನ್ನು ಈ ಸರಣಿಯೊಂದಿಗೆ ಆರಂಭಿಸುತ್ತೇವೆ ಎಂದು ಉಭಯ ತಂಡಗಳ ನಾಯಕರು ಹೇಳಿದ್ದಾರೆ. ‘ಏಕದಿನ ಕ್ರಿಕೆಟ್‌ ಮಾದರಿಯಲ್ಲಿ ಪಾಕಿಸ್ತಾನವು ಪ್ರಬಲ ತಂಡಗಳಲ್ಲಿ ಒಂದಾಗಿದೆ. ವಿಶ್ವಕಪ್‌ ಟೂರ್ನಿಯ ತಯಾರಿಗೆ ಈ ಸರಣಿ ನಮಗೆ ಉತ್ತಮ ಅವಕಾಶ ಎನಿಸಿದೆ’ ಎಂದು ಪಾಕ್‌ ತಂಡದ ನಾಯಕ ಬಾಬರ್‌ ಅಜಂ ತಿಳಿಸಿದ್ದಾರೆ. ಪಾಕ್‌ ತಂಡ ಕಳೆದ ವರ್ಷ ಆಡಿದ್ದ ಒಂಬತ್ತು ಏಕದಿನ ಪಂದ್ಯಗಳಲ್ಲಿ ಎಂಟರಲ್ಲೂ ಜಯ ಸಾಧಿಸಿತ್ತು. ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದಿದ್ದ ಸರಣಿಯನ್ನು 2–1 ರಲ್ಲಿ ಗೆದ್ದುಕೊಂಡಿತ್ತು. ಆತಿಥೇಯ ತಂಡ ವೇಗದ ಬೌಲರ್‌ ಶಹೀನ್‌ ಶಾ ಆಫ್ರಿದಿ ಅವರ ಅನುಪಸ್ಥಿತಿಯಲ್ಲಿ ಆಡಲಿದೆ. ಕಳೆದ ನವೆಂಬರ್‌ನಲ್ಲಿ ಮಂಡಿಯ ಗಾಯಕ್ಕೆ ಒಳಗಾಗಿದ್ದ ಅವರು ಇನ್ನೂ ಚೇತರಿಸಿಕೊಂಡಿಲ್ಲ. ಆರಂಭಿಕ ಬ್ಯಾಟರ್‌ ಫಖ್ರ್‌ ಜಮಾನ್‌ ವಾಪಸಾಗಿರುವುದು ತಂಡದ ಬಲ ಹೆಚ್ಚಿಸಿದೆ. ನ್ಯೂಜಿಲೆಂಡ್ ತಂಡ ಕಳೆದ ವರ್ಷ ಆಡಿದ್ದ 16 ಏಕದಿನ ಪಂದ್ಯಗಳಲ್ಲಿ 10ನ್ನು ಗೆದ್ದುಕೊಂಡಿದೆ. ಕಿವೀಸ್‌ ತಂಡವು ಏಕದಿನ ಮಾದರಿಯಲ್ಲಿ ಪಾಕಿಸ್ತಾನ ವಿರುದ್ಧ ಉತ್ತಮ ದಾಖಲೆ ಹೊಂದಿದೆ. ಉಭಯ ತಂಡಗಳು ಆಡಿದ್ದ ಕೊನೆಯ 15 ಪಂದ್ಯಗಳಲ್ಲಿ 12ನ್ನೂ ಗೆದ್ದುಕೊಂಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.