ಶ್ರವಣ ದೋಷವುಳ್ಳವರ ಕ್ರಿಕೆಟ್‌ ನಾಳೆಯಿಂದ ಮೈಸೂರು: ಶ್ರವಣ ದೋಷವುಳ್ಳವರ ರಾಜ್ಯಮಟ್ಟದ ಟೆನಿಸ್‌ ಬಾಲ್ ಕ್ರಿಕೆಟ್‌ ಟೂರ್ನಿಯು ಇಲ್ಲಿನ ಜಯಚಾಮರಾಜೇಂದ್ರ ಎಂಜಿನಿಯರಿಂಗ್‌ ಕಾಲೇಜು ಮೈದಾನದಲ್ಲಿ ಫೆ.25 ಹಾಗೂ 26ರಂದು ನಡೆಯಲಿದೆ. ‘ಜೆಎಸ್‌ಎಸ್‌ ವಿಶೇಷಚೇತನರ ಪಾಲಿಟೆಕ್ನಿಕ್‌ ಕಾಲೇಜು ಹಾಗೂ ಬೆಂಗಳೂರಿನ ಚೆಷೈರ್‌ ಡಿಸೆಬಿಲಿಟಿ ಟ್ರಸ್ಟ್ ವತಿಯಿಂದ ಲೀಗ್‌ ಹಾಗೂ ನಾಕ್‌ಔಟ್‌ ಮಾದರಿಯಲ್ಲಿ ಟೂರ್ನಿ ಆಯೋಜಿಸಲಾಗಿದೆ’ ಎಂದು ಕಾಲೇಜಿನ ಪ್ರಾಂಶುಪಾಲ ಬಿ.ಇಳಂಗೋವನ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ‘25ರಂದು ಬೆಳಿಗ್ಗೆ 11ಕ್ಕೆ ಆರಂಭಗೊಳ್ಳುವ ಟೂರ್ನಿಯಲ್ಲಿ ತುಮಕೂರು, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಬೆಂಗಳೂರು, ಕಲಬುರುಗಿ, ಚಾಮರಾಜನಗರ, ಮಂಡ್ಯ ಹಾಗೂ ಮೈಸೂರು ತಂಡಗಳು ಭಾಗವಹಿಸಲಿವೆ. ವಿಜೇತ ತಂಡಕ್ಕೆ ₹ 10ಸಾವಿರ, ದ್ವಿತೀಯ ಸ್ಥಾನ ಪಡೆದವರಿಗೆ ₹ 6ಸಾವಿರ ಬಹುಮಾನ, ಪದಕ ಹಾಗೂ ಪ್ರಮಾಣಪತ್ರ ನೀಡಲಾಗುವುದು’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.