2023: ಅಭಿಷೇಕ್, ಕ್ಲಾಸೆನ್‌ ಅಬ್ಬರ- ಸನ್‌ರೈಸರ್ಸ್ ಹೈದರಾಬಾದ್‌ಗೆ ಮಣಿದ ಡೆಲ್ಲಿ ನವದೆಹಲಿ: ಅಭಿಷೇಕ್‌ ಶರ್ಮಾ ಮತ್ತು ಹೆನ್ರಿಕ್‌ ಕ್ಲಾಸೆನ್‌ ಅವರ ಬಿರುಸಿನ ಆಟದ ಬಲದಿಂದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಐ‍ಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಗೆಲುವು ಸಾಧಿಸಿತು. ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡಕ್ಕೆ 9 ರನ್‌ಗಳ ಗೆಲುವು ಒಲಿಯಿತು. ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 197 ರನ್ ರನ್‌ ಪೇರಿಸಿತು. ಡೆಲ್ಲಿ ತಂಡವು 6 ವಿಕೆಟ್‌ ಕಳೆದುಕೊಂಡು 188 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಗುರಿ ಬೆನ್ನತ್ತಿದ ಡೆಲ್ಲಿ ತಂಡವು ನಾಯಕ ಡೇವಿಡ್‌ ವಾರ್ನರ್ ಅವರನ್ನು ಪಂದ್ಯದ ಮೊದಲ ಓವರ್‌ನಲ್ಲೇ ಶೂನ್ಯಕ್ಕೆ ಕಳೆದುಕೊಂಡಿತು. ಈ ವಿಕೆಟ್‌ ಗಳಿಸಿದ ವೇಗಿ ಭುವನೇಶ್ವರ್ ಕುಮಾರ್ ಹೈದರಾಬಾದ್ ತಂಡಕ್ಕೆ ಮೇಲುಗೈ ಒದಗಿಸಿಕೊಟ್ಟರು. ಎರಡನೇ ವಿಕೆಟ್‌ಗೆ ಫಿಲ್ ಸಾಲ್ಟ್‌ (59, 35ಎ, 4X9) ಹಾಗೂ ಮಿಚೆಲ್‌ ಮಾರ್ಷ್‌ (63, 39ಎ 4X1, 6X6) 110 ರನ್ ಸೇರಿಸಿ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ ಇವರಿಬ್ಬರು ಔಟಾದ ಬಳಿಕ ಬಂದ ಬ್ಯಾಟರ್‌ಗಳು ನಿರೀಕ್ಷಿತ ಆಟವಾಡುವಲ್ಲಿ ವಿಫಲರಾದರು. ಕೊನೆಯ ಹಂತದಲ್ಲಿ ಅಕ್ಷರ್ ಪಟೇಲ್ (29, 14ಎ, 4X1, 6X2) ನಡೆಸಿದ ಹೋರಾಟಕ್ಕೂ ಫಲ ಲಭಿಸಲಿಲ್ಲ. ಹೈದರಾಬಾದ್‌ ಪರ ಮಯಂಕ್ ಮಾರ್ಕಂಡೆ (20ಕ್ಕೆ 2) ಬೌಲಿಂಗ್‌ನಲ್ಲಿ ಮಿಂಚಿದರು. ಅಬ್ಬರದ ಆಟ: ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಾಯಕ ಏಡನ್ ಮರ್ಕರಂ ನಿರ್ಧಾರವನ್ನು ಬ್ಯಾಟರ್‌ಗಳು ಸಮರ್ಥಿಸಿಕೊಂಡರು. ಅಭಿಷೇಕ್‌ 36 ಎಸೆತಗಳಲ್ಲಿ 67 ರನ್‌ ಗಳಿಸಿದರೆ, ಕ್ಲಾಸೆನ್‌ ಅವರು ಅಜೇಯ ಅರ್ಧಶತಕದ (53 ರನ್‌, 27 ಎ., 4X2, 6X4) ಮೂಲಕ ಗಮನ ಸೆಳೆದರು. ಅಬ್ದುಲ್‌ ಸಮದ್‌ (28) ಕೊನೆಯಲ್ಲಿ ಸ್ಕೋರ್‌ ಹೆಚ್ಚಿಸಿದರು. ಅಭಿಷೇಕ್‌ ಹೊರತುಪಡಿಸಿದರೆ, ಹೈದರಾಬಾದ್‌ ತಂಡದ ಅಗ್ರ ಕ್ರಮಾಂಕದ ಇತರ ಬ್ಯಾಟರ್‌ಗಳು ವಿಫಲರಾದರು. ಮಿಚೆಲ್‌ ಮಾರ್ಷ್‌ (27ಕ್ಕೆ 4) ಅವರ ಚುರುಕಿನ ದಾಳಿಗೆ ಇತರ ಬ್ಯಾಟರ್‌ಗಳು ವಿಕೆಟ್‌ ಒಪ್ಪಿಸಿದರೂ, ಅಭಿಷೇಕ್‌ ಉತ್ತಮ ಲಯದಲ್ಲಿ ಆಡಿದರು. 12 ಬೌಂಡರಿ ಮತ್ತು ಒಂದು ಸಿಕ್ಸರ್‌ ಹೊಡೆದರು. 12ನೇ ಓವರ್‌ನಲ್ಲಿ ಅವರು ಔಟಾಗುವಾಗ ತಂಡದ ಸ್ಕೋರ್‌ 109 ಆಗಿತ್ತು. ಆ ಬಳಿಕ ದಕ್ಷಿಣ ಆಫ್ರಿಕಾದ ಬ್ಯಾಟರ್‌ ಕ್ಲಾಸೆನ್‌ ಅಬ್ಬರಿಸಿದರು. ಅಬ್ದುಲ್‌ ಸಮದ್‌ ಜತೆ ಆರನೇ ವಿಕೆಟ್‌ಗೆ 33 ಎಸೆತಗಳಲ್ಲಿ 53 ರನ್‌ ಹಾಗೂ ಅಕೀಲ್‌ ಹೊಸೇನ್‌ ಅವರೊಂದಿಗೆ ಏಳನೇ ವಿಕೆಟ್‌ಗೆ 18 ಎಸೆತಗಳಲ್ಲಿ 35 ರನ್‌ ಸೇರಿಸಿದರು. ಕೊನೆಯ ಐದು ಓವರ್‌ಗಳಲ್ಲಿ 62 ರನ್‌ಗಳು ಬಂದವು. ಸಂಕ್ಷಿಪ್ತ ಸ್ಕೋರ್‌: ಸನ್‌ರೈಸರ್ಸ್‌ ಹೈದರಾಬಾದ್‌ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 197 (ಅಭಿಷೇಕ್‌ ಶರ್ಮಾ 67, ರಾಹುಲ್‌ ತ್ರಿಪಾಠಿ 10, ಹೆನ್ರಿಕ್‌ ಕ್ಲಾಸೆನ್‌ ಔಟಾಗದೆ 53, ಅಬ್ದುಲ್‌ ಸಮದ್‌ 28, ಅಕೀಲ್‌ ಹೊಸೇನ್ ಔಟಾಗದೆ 16, ಮಿಚೆಲ್‌ ಮಾರ್ಷ್‌ 27ಕ್ಕೆ 4). ಡೆಲ್ಲಿ ಕ್ಯಾಪಿಟಲ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 188 (ಫಿಲ್ ಸಾಲ್ಟ್‌ 59, ಮಿಚೆಲ್ ಮಾರ್ಷ್‌ 63, ಅಕ್ಷರ್ ಪಟೇಲ್‌ ಔಟಾಗದೆ 29; ಭುವನೇಶ್ವರ್ ಕುಮಾರ್ 45ಕ್ಕೆ 1, ಟಿ.ನಟರಾಜನ್‌ 34ಕ್ಕೆ 1 ಮಯಂಕ್ ಮಾರ್ಕಂಡೆ 20ಕ್ಕೆ 2, ಅಭಿಷೇಕ್ ಶರ್ಮಾ 26ಕ್ಕೆ 1). ಫಲಿತಾಂಶ: ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ 9 ರನ್‌ಗಳ ಜಯ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.