ಆ್ಯಷಸ್ ಟೆಸ್ಟ್: ಉಭಯ ತಂಡಗಳಿಗೂ ದಂಡ ದುಬೈ (ಪಿಟಿಐ): ಆ್ಯಷಸ್ ಸರಣಿಯ ಮೊದಲ ಟೆಸ್ಟ್‌ ಪಂದ್ಯದಲ್ಲಿ ನಿಗದಿಯ ವೇಳೆಯೊಳಗೆ ಓವರ್‌ಗಳನ್ನು ಮುಗಿಸದ ಕಾರಣಕ್ಕೆ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳಿಗೆ ದಂಡ ವಿಧಿಸಲಾಗಿದೆ. ಎಜ್‌ಬಾಸ್ಟನ್‌ನಲ್ಲಿ ನಡೆದ ಟೆಸ್ಟ್ ಮಂಗಳವಾರ ರೋಚಕ ಅಂತ್ಯ ಕಂಡಿತ್ತು. ಈ ಪಂದ್ಯದ ಶುಲ್ಕದ ಶೇ 40ರಷ್ಟನ್ನು ತಂಡಗಳು ದಂಡವಾಗಿ ನೀಡಬೇಕು. ಅಲ್ಲದೇ ಉಭಯ ತಂಡಗಳಿಗೂ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ (ಡಬ್ಲ್ಯುಟಿಸಿ)ಎರಡು ಪಾಯಿಂಟ್‌ಗಳನ್ನೂ ಕಡಿತ ಮಾಡಲಾಗಿದೆ. ‘ಐಸಿಸಿ ಪಂದ್ಯ ರೆಫರಿಗಳ ಎಲೀಟ್‌ ಪ್ಯಾನೆಲ್‌ನ ಆ್ಯಂಡಿ ಪೈಕ್ರಾಫ್ಟ್‌ ಅವರು ದಂಡ ವಿಧಿಸುವ ನಿರ್ಣಯ ಕೈಗೊಂಡಿದ್ದಾರೆ. ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಹಾಗೂ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಅವರು ದಂಡ ಪಾವತಿಸಲು ಸಮ್ಮತಿಸಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಈ ಪಂದ್ಯದ ಗೆಲುವಿನಿಂದ ಆಸ್ಟ್ರೇಲಿಯಾ ಗಳಿಸಿದ್ದ 12 ರಲ್ಲಿ ಎರಡು ಅಂಕಗಳನ್ನು ಕಡಿತಗೊಳಿಸಲಾಗಿದೆ. ಮೂರನೇ ಡಬ್ಲ್ಯುಟಿಸಿಯ ಮೊದಲ ಪಂದ್ಯ ಇದಾಗಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 2 ವಿಕೆಟ್‌ಗಳಿಂದ ಜಯಿಸಿತು. ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು. ಉಸ್ಮಾನ್ ಖ್ವಾಜಾ ಮತ್ತು ನಾಯಕ ಪ್ಯಾಟ್ ಕಮಿನ್ಸ್‌ ಅವರ ಅಮೋಘ ಬ್ಯಾಟಿಂಗ್‌ನಿಂದ ಆಸ್ಟ್ರೇಲಿಯಾ ಗೆದ್ದಿತು. ಎರಡನೇ ಚಾಂಪಿಯನ್‌ಷಿಪ್‌ನಲ್ಲಿ ಆಸ್ಟ್ರೇಲಿಯಾ ಪ್ರಶಸ್ತಿ ಜಯಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.