ಅಫ್ಗಾನಿಸ್ತಾನಕ್ಕೆ 662 ರನ್‌ ಗುರಿ ನೀಡಿದ ಬಾಂಗ್ಲಾದೇಶ ಮೀರ್‌ಪುರ: ನಜ್ಮುಲ್‌ ಹೊಸೇನ್‌ ಶಾಂತೊ ಮತ್ತು ಮೋಮಿನುಲ್‌ ಹಕ್‌ ಅವರ ಶತಕಗಳ ನೆರವಿನಿಂದ ಬಾಂಗ್ಲಾದೇಶ ತಂಡ ಇಲ್ಲಿ ನಡೆಯುತ್ತಿರುವ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡದ ಗೆಲುವಿಗೆ 662 ರನ್‌ಗಳ ಗುರಿ ನೀಡಿದೆ. ಮೂರನೇ ದಿನವಾದ ಶುಕ್ರವಾರ ಆತಿಥೇಯ ತಂಡ 4 ವಿಕೆಟ್‌ಗಳಿಗೆ 425 ರನ್‌ ಗಳಿಸಿ ಎರಡನೇ ಇನಿಂಗ್ಸ್‌ ಡಿಕ್ಲೇರ್‌ ಮಾಡಿತು. ಮೊದಲ ಇನಿಂಗ್ಸ್‌ನಲ್ಲಿ 146 ರನ್‌ ಗಳಿಸಿದ್ದ ನಜ್ಮುಲ್, ಎರಡನೇ ಇನಿಂಗ್ಸ್‌ನಲ್ಲೂ ಶತಕ (124) ಗಳಿಸಿ ಗಮನ ಸೆಳೆದರು. ಅವರಿಗೆ ತಕ್ಕ ಸಾಥ್‌ ನೀಡಿದ ಮೋಮಿನುಲ್ ಅಜೇಯ 121 ರನ್‌ ಕಲೆಹಾಕಿದರು. ಸವಾಲಿನ ಗುರಿ ಬೆನ್ನಟ್ಟಿರುವ ಅಫ್ಗಾನಿಸ್ತಾನ ತಂಡ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ ಕಳೆದುಕೊಂಡು 45 ರನ್‌ ಗಳಿಸಿದೆ. ಎರಡು ದಿನಗಳ ಆಟ ಬಾಕಿಯಿದ್ದು, ಇನ್ನೂ 617 ರನ್‌ ಗಳಿಸುವ ಸವಾಲು ಪ್ರವಾಸಿ ತಂಡದ ಮುಂದಿದೆ. ನಾಯಕ ಹಶ್ಮತ್‌ ಉಲ್ಲಾ ಶಾಹಿದಿ ಅವರು ಗಾಯಗೊಂಡು ನಿವೃತ್ತಿಯಾಗಿದ್ದು ಅಫ್ಗಾನಿಸ್ತಾನಕ್ಕೆ ಹಿನ್ನಡೆ ಉಂಟುಮಾಡಿದೆ. ವೇಗದ ಬೌಲರ್‌ ತಸ್ಕಿನ್‌ ಅಹಮದ್‌ ಹಾಕಿದ ಬೌನ್ಸರ್‌ನಲ್ಲಿ ಚೆಂಡು ಶಾಹಿದಿ ಅವರ ತಲೆಗೆ ಬಡಿದಿದೆ. ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ ಮೊದಲ ಇನಿಂಗ್ಸ್ 382 ಮತ್ತು ಎರಡನೇ ಇನಿಂಗ್ಸ್ 80 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 425 ಡಿಕ್ಲೇರ್ಡ್‌ (ಜಾಕಿರ್‌ ಹಸನ್ 71, ನಜ್ಮುಲ್‌ ಹೊಸೇನ್ 124, ಮೋಮಿನುಲ್‌ ಹಕ್‌ ಔಟಾಗದೆ 121, ಲಿಟನ್ ದಾಸ್‌ ಔಟಾಗದೆ 66, ಜಹೀರ್‌ ಖಾನ್‌ 112ಕ್ಕೆ 2) ಅಫ್ಗಾನಿಸ್ತಾನ ಮೊದಲ ಇನಿಂಗ್ಸ್ 146 ಮತ್ತು ಎರಡನೇ ಇನಿಂಗ್ಸ್ 11 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 45 (ರಹಮತ್‌ ಶಾ ಬ್ಯಾಟಿಂಗ್ 10, ನಾಸಿರ್‌ ಜಮಾಲ್‌ ಬ್ಯಾಟಿಂಗ್ 5) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.