ಆ್ಯಷಸ್‌: ಸಂಕಷ್ಟದಲ್ಲಿ ಇಂಗ್ಲೆಂಡ್‌ ಲಂಡನ್‌: ಆ್ಯಷಸ್‌ ಸರಣಿಯ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಶನಿವಾರ ಗೆಲುವಿಗೆ 371 ರನ್‌ಗಳ ಸವಾಲು ಎದುರಿಸಿರುವ ಆತಿಥೇಯ ಇಂಗ್ಲೆಂಡ್‌ ಆರಂಭದಲ್ಲೇ ತೊಂದರೆಗೆ ಸಿಲುಕಿದೆ. ಲಾರ್ಡ್ಸ್‌ನಲ್ಲಿ ಇದು ದಾಖಲೆ ಮೊತ್ತದ ಗುರಿಯಾಗಿದ್ದು, ಆತಿಥೇಯ ತಂಡ ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್ ಕಳೆದುಕೊಂಡು 28 ರನ್‌ ಗಳಿಸಿದೆ. ಆಸ್ಟ್ರೇಲಿಯಾದ ವೇಗಿ ಮಿಚೆಲ್‌ ಸ್ಟಾರ್ಕ್‌ ಅವರು ಆರಂಭ ಆಟಗಾರ ಜಾಕ್‌ ಕ್ರಾಲಿ ಮತ್ತು ಓಲಿ ಪೋಪ್ ಅವರ ವಿಕೆಟ್‌ಗಳನ್ನು ಪಡೆದರು. ಬೆನ್‌ ಡಕೆಟ್‌ (ಬ್ಯಾಟಿಂಗ್ 11) ಮತ್ತು ಜೋ ರೂಟ್‌ (ಬ್ಯಾಟಿಂಗ್ 9) ಹೋರಾಟ ಮುಂದುವರಿಸಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 91 ರನ್‌ಗಳ ಮುನ್ನಡೆ ಪಡೆದಿದ್ದ ಆಸ್ಟ್ರೇಲಿಯಾ (ಶುಕ್ರವಾರ: 2 ವಿಕೆಟ್‌ಗೆ 130) ಶನಿವಾರ ಆಟ ಮುಂದುವರಿಸಿ ಚಹ ವಿರಾಮದ ವೇಳೆಗೆ 279 ರನ್‌ಗಳಿಗೆ ಆಲೌಟ್ ಆಯಿತು. ಉಸ್ಮಾನ್‌ ಖ್ವಾಜಾ 77 ರನ್‌ ಗಳಿಸಿದರು. ಇತರೆ ರೂಪದಲ್ಲಿ 36 ರನ್‌ಗಳು ಬಂದವು. ಸತತ 100ನೇ ಟೆಸ್ಟ್‌ ಆಡಿದ ಆಫ್‌ ಸ್ಪಿನ್ನರ್‌ ನಥಾನ್‌ ಲಯನ್ ಅವರು ಗುರುವಾರ ಫೀಲ್ಡ್‌ ಮಾಡುವ ವೇಳೆ ಮೀನಖಂಡದ ಗಾಯದಿಂದ ಬಳಲಿದ್ದರು. ಅವರು ಬ್ಯಾಟ್ ಮಾಡಲು ಬಂದಾಗ ಪ್ರೇಕ್ಷಕರು ಎದ್ದುನಿಂತು ಕರತಾಡನ ಮಾಡಿದರು. ಅವರು ಎರಡನೇ ಇನಿಂಗ್ಸ್‌ನಲ್ಲಿ ಬೌಲಿಂಗ್‌ ಮಾಡುವುದು ಅನುಮಾನ. ಸ್ಕೋರುಗಳು: ಮೊದಲ ಇನಿಂಗ್ಸ್‌: ಆಸ್ಟ್ರೇಲಿಯಾ: 416, ಇಂಗ್ಲೆಂಡ್‌: 325; ಎರಡನೇ ಇನಿಂಗ್ಸ್‌: ಆಸ್ಟ್ರೇಲಿಯಾ: 101.5 ಓವರುಗಳಲ್ಲಿ 279 (ಉಸ್ಮಾನ್‌ ಖ್ವಾಜಾ 77, ಸ್ಮಿತ್‌ 34, ಅಲೆಕ್ಸ್‌ ಕ್ಯಾರಿ 21, ಮಿಚೆಲ್‌ ಸ್ಟಾರ್ಕ್‌ ಔಟಾಗದೇ 15; ಸ್ಟುವರ್ಟ್‌ ಬ್ರಾಡ್‌ 65ಕ್ಕೆ4, ಟಂಗ್ 53ಕ್ಕೆ2, ಒಲಿ ರಾಬಿನ್ಸನ್‌ 48ಕ್ಕೆ2), ಇಂಗ್ಲೆಂಡ್‌: 9 ಓವರುಗಳಲ್ಲಿ 2 ವಿಕೆಟ್‌ಗೆ 28 (ಸ್ಟಾರ್ಕ್ 17ಕ್ಕೆ2) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.