ಕ್ರಿಕೆಟ್‌: ಮಹಿಳಾ ತಂಡಕ್ಕೆ ಮಜುಂದಾರ್‌ ಕೋಚ್ ನವದೆಹಲಿ: ಮಾಜಿ ಆಟಗಾರ ಅಮೋಲ್‌ ಮಜುಂದಾರ್‌ ಅವರು ಭಾರತ ಮಹಿಳಾ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕಗೊಳ್ಳುವ ಸಾಧ್ಯತೆಯಿದೆ. ಮಹಿಳಾ ತಂಡದ ಕೋಚ್‌ ಆಯ್ಕೆ ಸಂಬಂಧ ಅಶೋಕ್‌ ಮಲ್ಹೋತ್ರ, ಜತಿನ್‌ ಪರಾಂಜಪೆ ಮತ್ತು ಸುಲಕ್ಷಣಾ ಕುಲಕರ್ಣಿ ಅವರನ್ನೊಳಗೊಂಡ ಕ್ರಿಕೆಟ್‌ ಸಲಹಾ ಸಮಿತಿಯು (ಸಿಎಸಿ) ಮುಂಬೈನಲ್ಲಿ ಸೋಮವಾರ ಆಕಾಂಕ್ಷಿಗಳ ಸಂದರ್ಶನ ನಡೆಸಿತು. ‘ಮಹಿಳಾ ತಂಡದ ಯಶಸ್ಸಿಗೆ ಮಜುಂದಾರ್‌ ಹೊಂದಿರುವ ಸ್ಪಷ್ಟ ಯೋಜನೆಗಳು ಸಮಿತಿಗೆ ಇಷ್ಟವಾಗಿದೆ. ಇತರ ಅಭ್ಯರ್ಥಿಗಳಿಗೆ ಹೋಲಿಸಿದರೆ ಮಜುಂದಾರ್‌ ಅವರ ಪ್ರಸ್ತುತಿಯು ಅತ್ಯತ್ತಮವಾಗಿತ್ತು. ಸಿಎಸಿ ಈ ಹುದ್ದೆಗೆ ಅವರ ಹೆಸರನ್ನೇ ಶಿಫಾರಸು ಮಾಡಲಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧ ಜುಲೈ 9 ರಿಂದ ಆರಂಭವಾಗಲಿರುವ ಸರಣಿಯು ಮಜುಂದಾರ್‌ ಅವರ ಮೊದಲ ಸರಣಿ ಎನಿಸಲಿದೆ. ಈ ಹಿಂದೆ ಕೋಚ್‌ ಆಗಿದ್ದ ರಮೇಶ್‌ ಪೊವಾರ್‌ ಅವರನ್ನು ಕಳೆದ ಡಿಸೆಂಬರ್‌ನಲ್ಲಿ ವಜಾಗೊಳಿಸಿದ್ದ ಬಳಿಕ ಈ ಹುದ್ದೆಗೆ ಯಾರನ್ನೂ ನೇಮಿಸಿರಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.