ಇಂಗ್ಲೆಂಡ್‌ಗೆ ಸರಣಿ ಗೆಲುವಿನ ಕನಸು ಜೀವಂತ ಲೀಡ್ಸ್ (ಎಪಿ): ಆ್ಯಷಸ್ ಸರಣಿಯನ್ನು ಕೈವಶ ಮಾಡಿಕೊಳ್ಳುವ ಆಸ್ಟ್ರೇಲಿಯಾದ ಗುರಿಗೆ ಇಂಗ್ಲೆಂಡ್ ತಂಡದ ಬ್ಯಾಟರ್‌ಗಳು ಅಡ್ಡಿಯಾದರು. ಹ್ಯಾರಿ ಬ್ರೂಕ್ ಮತ್ತು ಕ್ರಿಸ್ ವೋಕ್ಸ್ (ಔಟಾಗದೆ 32) ಅವರು ಏಳನೇ ವಿಕೆಟ್‌ ಜೊತೆಯಾಟದಲ್ಲಿ ಸೇರಿಸಿದ 59 ರನ್‌ಗಳಿಂದಾಗಿ ಇಂಗ್ಲೆಂಡ್ ತಂಡವು 3 ವಿಕೆಟ್‌ಗಳ ರೋಚಕ ಜಯ ಸಾಧಿಸಿತು. ಇದರೊಂದಿಗೆ ಐದು ಪಂದ್ಯಗಳ ಸರಣಿ ಜಯದ ಕನಸನ್ನು ಜೀವಂತವಾಗಿ ಉಳಿಸಿಕೊಂಡಿತು. ಮೊದಲ ಎರಡು ಪಂದ್ಯಗಳಲ್ಲಿ ಗೆದ್ದಿದ್ದ ಆಸ್ಟ್ರೇಲಿಯಾ ಇಲ್ಲಿಯೂ ಕಠಿಣ ಪೈಪೋಟಿಯೊಡ್ಡಿತು. 251 ರನ್‌ಗಳ ಜಯದ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ ತಂಡಕ್ಕೆ ಹಾದಿ ಸುಲಭವಾಗಿರಲಿಲ್ಲ. ಬ್ರೂಕ್ (75; 93ಎ, 4X9) ಮತ್ತು ಕ್ರಿಸ್ (ಅಜೇಯ 32) ಅವರಿಬ್ಬರ ಆಟದಿಂದ ತಂಡವು ಜಯದ ಸನಿಹ ಸಾಗಿತ್ತು. ತಂಡವು 131 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಆದರೆ ನಂತರದ 99 ರನ್‌ಗಳನ್ನು ಗಳಿಸುವಷ್ಟರಲ್ಲಿ ಮತ್ತೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ ಈ ಹಂತದಲ್ಲಿ ಬ್ರೂಕ್ ಆತ್ಮವಿಶ್ವಾಸದಿಂದ ಆಡಿದರು. ಜಾನಿ ಬೆಸ್ಟೊ (5 ರನ್) ಕೂಡ ಹೆಚ್ಚು ಹೊತ್ತು ನಿಲ್ಲಲು ಸ್ಟಾರ್ಕ್ ಬಿಡಲಿಲ್ಲ. 48ನೇ ಓವರ್‌ನಲ್ಲಿ ಹ್ಯಾರಿ ಬ್ರೂಕ್ ವಿಕೆಟ್ ಗಳಿಸಿದ ಸ್ಟಾರ್ಕ್‌ ಕೇಕೆ ಹಾಕಿದರು. ಆಗ ತಂಡದ ಮೊತ್ತವು 7 ವಿಕೆಟ್‌ಗಳಿಗೆ 230 ರನ್‌ಗಳಾಗಿದ್ದವು. ಈ ಹಂತದಲ್ಲಿ ಕ್ರಿಸ್ ಅವರೊಂದಿಗೆ ಸೇರಿಕೊಂಡ ಮಾರ್ಕ್ ವುಡ್ (ಅಜೇಯ 16, 8ಎಸೆತ) ಆತಂಕ ದೂರ ಮಾಡಿದರು. ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದ ಮಾರ್ಕ್ ರನ್‌ ಗಳಿಕೆಯ ವೇಗ ಹೆಚ್ಚಿಸಿದರು. ಆದರೆ ಈ ಧಾವಂತದಲ್ಲಿ ಒಂದು ಬಾರಿ ವಿಕೆಟ್‌ಕೀಪರ್ ಅಲೆಕ್ಸ್‌ ಕ್ಯಾರಿಯಿಂದ ಜೀವದಾನ ಕೂಡ ಲಭಿಸಿತು. ಮಾರ್ಕ್ ವುಡ್ ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಗಳಿಸಿದ್ದರು. ಬ್ಯಾಟಿಂಗ್‌ನಲ್ಲಿಯೂ ತಮ್ಮ ಪ್ರತಿಭೆ ಮೆರೆದು ಇಂಗ್ಲೆಂಡ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಆಸ್ಟ್ರೇಲಿಯಾದ ಬೌಲರ್‌ಗಳ ಶಾರ್ಟ್ ಪಿಚ್‌ ಎಸೆತಗಳನ್ನು ಆಡುವುದು ಸುಲಭವಾಗಿರಲಿಲ್ಲ. ಸ್ಟಾರ್ಕ್, ಬೊಲಾಂಡ್ ಮತ್ತು ಕಮಿನ್ಸ್ ಅವರ ಬೌನ್ಸರ್‌ಗಳ ಮುಂದೆ ಅಗ್ರಕ್ರಮಾಂಕದ ಬ್ಯಾಟರ್‌ಗಳು ಬೇಗನೆ ಔಟಾಗಿದ್ದರು. ಆದರೂ ಛಲದಿಂದ ಆಡಿದ ಕ್ರಿಸ್ ಮತ್ತು ವುಡ್ ಗಮನ ಸೆಳೆದರು. ಸರಣಿಯ ಮೊದಲ ಎರಡೂ ಪಂದ್ಯಗಳೂ ರೋಚಕ ಅಂತ್ಯ ಕಂಡಿದ್ದವು. ಅವುಗಳಲ್ಲಿ ಇಂಗ್ಲೆಂಡ್‌ ತಂಡಕ್ಕೆ ಅದೃಷ್ಟ ಒಲಿದಿರಲಿಲ್ಲ. ಈ ಪಂದ್ಯದಲ್ಲಿಯೂ ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯ ತಂಡವು ಹಿನ್ನಡೆ ಅನುಭವಿಸಿತ್ತು. ಸರಣಿ ಜಯಿಸಬೇಕಾದರೆ ಇಂಗ್ಲೆಂಡ್‌ ಇನ್ನುಳಿದಿರುವ ಎರಡೂ ಪಂದ್ಯಗಳನ್ನು ಗೆಲ್ಲಬೇಕು. 2–1ರಿಂದ ಮುನ್ನಡೆಯಲ್ಲಿರುವ ಆಸ್ಟ್ರೇಲಿಯಾ ಒಂದು ಗೆದ್ದರೂ ಸಾಕು. ಸಂಕ್ಷಿಪ್ತ ಸ್ಕೋರು:ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 60.4 ಓವರ್‌ಗಳಲ್ಲಿ 263. ಇಂಗ್ಲೆಂಡ್: 52.3 ಓವರ್‌ಗಳಲ್ಲಿ 237. ಎರಡನೇ ಇನಿಂಗ್ಸ್: ಆಸ್ಟ್ರೇಲಿಯಾ: 67.1 ಓವರ್‌ಗಳಲ್ಲಿ 224. ಇಂಗ್ಲೆಂಡ್: 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 254 (ಹ್ಯಾರಿ ಬ್ರೂಕ್ 75, ಕ್ರಿಸ್ ವೋಕ್ಸ್ ಅಜೇಯ 32, ಮಾರ್ಕ್ ವುಡ್ ಅಜೇಯ 16, ಮಿಚೆಲ್ ಸ್ಟಾರ್ಕ್ 78ಕ್ಕೆ5, ಪ್ಯಾಟ್ ಕಮಿನ್ಸ್ 77ಕ್ಕೆ1, ಮಿಚೆಲ್ ಮಾರ್ಷ್ 23ಕ್ಕೆ1) ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 3 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ಮಾರ್ಕ್ ವುಡ್. ಸರಣಿ 2–1. ಮುಂದಿನ ಪಂದ್ಯ: ಜುಲೈ 19ರಿಂದ 23 (ಸ್ಥಳ: ಮ್ಯಾಂಚೆಸ್ಟರ್) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.