ದುಲೀಪ್ ಟ್ರೋಫಿ ಫೈನಲ್: ಜಯದ ಕನಸಿನಲ್ಲಿ ದಕ್ಷಿಣ ವಲಯ ಬೆಂಗಳೂರು: ಶನಿವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಮಳೆ ಬರಲಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಿಸಿಲಿನ ಚಿನ್ನಾಟವೂ ಇತ್ತು. ಈ ಅಹ್ಲಾದಕರ ವಾತಾವರಣದಲ್ಲಿ ನಡೆದ ದುಲೀಪ್ ಟ್ರೋಫಿ ಫೈನಲ್‌ ಪಂದ್ಯದ ನಾಲ್ಕನೇ ದಿನದಾಟವೂ ರಸವತ್ತಾಗಿತ್ತು. ವಾರಾಂತ್ಯದ ಮೋಜಿಗಾಗಿ ಗ್ಯಾಲರಿಯಲ್ಲಿ ಸೇರಿದ್ದ ಕ್ರಿಕೆಟ್‌ಪ್ರಿಯರಿಗೂ ಮನರಂಜನೆ ಲಭಿಸಿತು. ಇದೆಲ್ಲದರ ನಡುವೆ ಈ ಟ್ರೋಫಿಗೆ ಮುತ್ತಿಡಲು ದಕ್ಷಿಣ ವಲಯ ಇನ್ನೂ ಅರ್ಧ ಹಾದಿ ಕ್ರಮಿಸಬೇಕಿದೆ. ಪಶ್ಚಿಮ ವಲಯಕ್ಕೂ ಅವಕಾಶ ಇನ್ನೂ ಇದೆ. ಆದ್ದರಿಂದ ಭಾನುವಾರ ದಿನದಾಟವು ರೋಚಕವಾಗುವ ಸಾಧ್ಯತೆ ಇದೆ. ಪಂದ್ಯದ ನಾಲ್ಕನೇ ದಿನದಾಟದಲ್ಲಿ 298 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿರುವ ಪಶ್ಚಿಮ ವಲಯಕ್ಕೆ ದಕ್ಷಿಣ ವಲಯ ತಂಡದ ಮಧ್ಯಮವೇಗಿ ಕೌಶಿಕ್ ವಾಸುಕಿ (28ಕ್ಕೆ3) ಪೆಟ್ಟು ನೀಡಿದರು. ಅದರೆ ಪಶ್ಚಿಮ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್ (92 ಬ್ಯಾಟಿಂಗ್, 315 ನಿಮಿಷ, 205ಎ, 4X11)ಅವರ ತಾಳ್ಮೆಯ ಬ್ಯಾಟಿಂಗ್‌ನಿಂದ ತಂಡ 62.3 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 182 ರನ್‌ ಗಳಿಸಿದೆ. ಗೆಲುವಿಗೆ ಇನ್ನೂ 116 ರನ್‌ ಬೇಕಿದೆ. ಪಶ್ಚಿಮ ತಂಡದ ಆರಂಭಿಕ ಬ್ಯಾಟರ್ ಪೃಥ್ವಿ ಶಾ ಅವರನ್ನು ಇನಿಂಗ್ಸ್‌ನ ಎಂಟನೇ ಓವರ್‌ನಲ್ಲಿ ಕ್ಲೀನ್ ಬೌಲ್ಡ್ ಮಾಡಿದ ಕೌಶಿಕ್ ವಿಕೆಟ್‌ ಖಾತೆ ತೆರೆದರು. ಐದು ಓವರ್‌ಗಳ ನಂತರ ವೈಶಾಖ ಇನ್ನೊಂದು ಬದಿಯಿಂದ ಹರ್ವಿಕ್ ದೇಸಾಯಿಯನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಲಯ ಕಂಡುಕೊಳ್ಳಲು ಪರದಾಟಿದ ಚೇತೇಶ್ವರ್ ಪೂಜಾರ (15 ರನ್) ಮತ್ತು ಸೂರ್ಯಕುಮಾರ್ ಯಾದವ್ (4 ರನ್) ಅವರಿಬ್ಬರಿಗೂ ಒಂದೇ ಓವರ್‌ನಲ್ಲಿ ಪೆವಿಲಿಯನ್‌ ದಾರಿ ತೋರಿಸಿದ ಕೌಶಿಕ್ ಸಂಭ್ರಮಿಸಿದರು. ಪೂಜಾರ ಅವರು ಶಾರ್ಟ್‌ ಲೆಗ್‌ ಫೀಲ್ಡರ್ ತಿಲಕ್ ವರ್ಮಾ ಕ್ಯಾಚ್ ಕೊಟ್ಟರೆ, ಸೂರ್ಯ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಇವೆಲ್ಲವೂ ಚಹಾ ವಿರಾಮಕ್ಕೆ ಮುನ್ನ ನಡೆದವು. ನಂತರದ ಅವಧಿಯಲ್ಲಿಯೇ ಪಂದ್ಯ ಮುಗಿಸುವ ಉತ್ಸಾಹದಲ್ಲಿದ್ದ ಹನುಮವಿಹಾರಿ ಬಳಗಕ್ಕೆ ಪಾಂಚಾಲ್ ಮತ್ತು ಸರ್ಫರಾಜ್ ಖಾನ್ (48; 76ಎ, 4X5, 6X1) ಅಡ್ಡಿಯಾದರು. ಐದನೇ ವಿಕೆಟ್ ಜೊತೆಯಾಟದಲ್ಲಿ 98 ರನ್‌ ಸೇರಿಸಿದ ಇಬ್ಬರೂ ತಂಡದಲ್ಲಿ ಗೆಲುವಿನ ಭರವಸೆ ಮೂಡಿಸಿದ್ದರು. ಇಡೀ ಟೂರ್ನಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಇಬ್ಬರೂ ಬ್ಯಾಟರ್‌ಗಳು ಇಲ್ಲಿ ಮಿಂಚಿದರು. ಆದರೆ, ದಿನದಾಟಕ್ಕೆ ಮಂದಬೆಳಕು ತೆರೆಯೆಳೆಯುವ ಮೂರು ಎಸೆತಗಳ ಮುನ್ನ ಸರ್ಫರಾಜ್ ಖಾನ್ ವಿಕೆಟ್ ಗಳಿಸಿದ ಎಡಗೈ ಸ್ಪಿನ್ನರ್ ಸಾಯಿಕಿಶೋರ್ ದಕ್ಷಿಣ ಬಳಗದ ಜಯದಾಸೆಗೆ ಮರುಜೀವ ನೀಡಿದರು. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ದಕ್ಷಿಣ ವಲಯ: 213. ಪಶ್ಚಿಮ ವಲಯ: 146. ಎರಡನೇ ಇನಿಂಗ್ಸ್: ದಕ್ಷಿಣ ವಲಯ: 81.1 ಓವರ್‌ಗಳಲ್ಲಿ 230 (ವಾಷಿಂಗ್ಟನ್ ಸುಂದರ್ 37, ವೈಶಾಖ ವಿಜಯಕುಮಾರ್ 23, ಧರ್ಮೆಂದ್ರಸಿಂಹ ಜಡೇಜ 40ಕ್ಕೆ5, ಅರ್ಜನ್ ನಾಗಸವಾಲಾ 68ಕ್ಕೆ2, ಅತಿಥ್ ಶೇಠ್ 38ಕ್ಕೆ2) ಪಶ್ಚಿಮ ವಲಯ: 62.3 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 182 (ಪ್ರಿಯಾಂಕ್ ಪಾಂಚಾಲ್ ಬ್ಯಾಟಿಂಗ್ 92, ಚೇತೇಶ್ವರ್ ಪೂಜಾರ 15, ಸೂರ್ಯಕುಮಾರ್ ಯಾದವ್ 4, ಸರ್ಫರಾಜ್ ಖಾನ್ 48, ವಾಸುಕಿ ಕೌಶಿಕ್ 28ಕ್ಕೆ3, ವೈಶಾಖ ವಿಜಯಕುಮಾರ್ 26ಕ್ಕೆ1, ಸಾಯಿಕಿಶೋರ್ 51ಕ್ಕೆ1) ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 8000 ರನ್ ಪೂರೈಸಿದ ಪ್ರಿಯಾಂಕ್ ಪಾಂಚಾಲ್ ಧರ್ಮೇಂದ್ರಸಿಂಹ ಜಡೇಜಗೆ ಐದು ವಿಕೆಟ್ ಪ್ರಮುಖ ವಿಕೆಟ್‌ಗಳನ್ನು ತೆಗೆದುಕೊಂಡಿದ್ದೇವೆ. ಇನ್ನೈದು ವಿಕೆಟ್‌ಗಳನ್ನು ಉರುಳಿಸಬೇಕು. ನಮ್ಮ ಬೌಲಿಂಗ್ ಪಡೆ ಉತ್ತಮವಾಗಿದೆ. ಗೆಲುವಿನ ಅವಕಾಶ ನಮಗೇ ಹೆಚ್ಚು –ವಿ. ಕೌಶಿಕ್ ದಕ್ಷಿಣ ವಲಯ ಬೌಲರ್ ಜಡೇಜಗೆ ಐದು ವಿಕೆಟ್ ಪಶ್ಚಿಮ ವಲಯದ ಧರ್ಮೆಂದ್ರಸಿಂಗ್ ಜಡೇಜ ಐದು ವಿಕೆಟ್ ಗೊಂಚಲು ಗಳಿಸಿದರು. ಶುಕ್ರವಾರ ಮೊದಲ ಇನಿಂಗ್ಸ್‌ನಲ್ಲಿ 67 ರನ್‌ಗಳ ಮುನ್ನಡೆ ಸಾಧಿಸಿದ್ದ ದಕ್ಷಿಣ ವಲಯವು ಎರಡನೇ ಇನಿಂಗ್ಸ್‌ನಲ್ಲಿ 60 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 181 ರನ್ ಗಳಿಸಿತ್ತು. ನಾಲ್ಕನೇ ದಿನ ಬೆಳಿಗ್ಗೆ ವಾಷಿಂಗ್ಟನ್ ಸುಂದರ್ ಮತ್ತು ವೈಶಾಖ ಉತ್ತಮವಾಗಿ ಬ್ಯಾಟಿಂಗ್ ಮಾಡಿ ತಂಡದ ಮೊತ್ತ ಹೆಚ್ಚಿಸಿದರು. ಅವರ ಜೊತೆಯಾಟವು ಹೆಚ್ಚು ಬೆಳೆಯದಂತೆ ಜಡೇಜ ತಡೆದರು. ವಾಷಿಂಗ್ಟನ್ ವೈಶಾಖ ಮತ್ತು ಕೌಶಿಕ್ ಅವರ ವಿಕೆಟ್‌ಗಳನ್ನು ಗಳಿಸಿದರು. ಬರದ ಮಳೆ! ಬೆಂಗಳೂರಿನಲ್ಲಿ ನಡೆದ ದುಲೀಪ್ ಟ್ರೋಫಿ ಕ್ವಾರ್ಟರ್‌ಫೈನಲ್ ಸೆಮಿಫೈನಲ್ ಪಂದ್ಯಗಳ ಎಲ್ಲ ದಿನವೂ ಮಳೆ ಹಾಗೂ ಮಂದ ಬೆಳಕಿನಿಂದಾಗಿ ಆಟದ ಸಮಯ ವ್ಯರ್ಥವಾಗಿತ್ತು. ಫೈನಲ್ ಪಂದ್ಯದ ಮೊದಲ ಮೂರು ದಿನಗಳಲ್ಲಿಯೂ ಮಳೆಯಿಂದಾಗಿ ಬಹಳಷ್ಟು ಸಮಯ ನಷ್ಟವಾಗಿತ್ತು. ಆದರೆ ಶನಿವಾರ ದಿನದಾಟದಲ್ಲಿ ಮಳೆ ಕಾಡಲಿಲ್ಲ. ಸಂಜೆ 5.22ಕ್ಕೆ ಮಂದ ಬೆಳಕಿನಿಂದ ಆಟ ನಿಂತಿತು. ಸ್ವಲ್ಪ ಹೊತ್ತಿನ ನಂತರ ರಭಸದ ಮಳೆ ಸುರಿಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.