ಎಮರ್ಜಿಂಗ್‌ ಕಪ್‌: ನೇಪಾಳ ವಿರುದ್ಧ ಗೆಲುವು, ಸೆಮಿಫೈನಲ್‌ಗೆ ಭಾರತ ‘ಎ’ ಕೊಲಂಬೊ: ಸಾಯಿ ಸುದರ್ಶನ್‌ ಮತ್ತು ಅಭಿಷೇಕ್‌ ಶರ್ಮಾ ಅವರ ಅರ್ಧಶತಕಗಳ ನೆರವಿನಿಂದ ನೇಪಾಳ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿದ ಭಾರತ ‘ಎ’ ತಂಡ, ಎಸಿಸಿ ಎಮರ್ಜಿಂಗ್‌ ಕಪ್‌ ಏಕದಿನ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿತು. ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ನೇಪಾಳ 39.2 ಓವರ್‌ಗಳಲ್ಲಿ 167 ರನ್‌ಗಳಿಗೆ ಆಲೌಟಾಯಿತು. ನಿಶಾಂತ್‌ ಸಿಂಧು (14ಕ್ಕೆ 4) ಮತ್ತು ರಾಜವರ್ಧನ್ ಹಂಗರ್‌ಗೇಕರ್ (25ಕ್ಕೆ 3) ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿಯನ್ನು ಎದುರಿಸಲು ನೇಪಾಳ ಬ್ಯಾಟರ್‌ಗಳು ವಿಫಲರಾದರು. ನಾಯಕ ರೋಹಿತ್‌ ಪೌದೆಲ್ (65 ರನ್‌) ಗರಿಷ್ಠ ಸ್ಕೋರ್‌ ಎನಿಸಿಕೊಂಡರು. ಭಾರತ ‘ಎ’ ತಂಡ 22.1 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್‌ ಕಳೆದುಕೊಂಡು ಗೆಲುವಿನ ಗಡಿ ದಾಟಿತು. ಅಭಿಷೇಕ್ (87 ರನ್‌, 69 ಎ., 4X12, 6X2) ಮತ್ತು ಸುದರ್ಶನ್ (ಔಟಾಗದೆ 58, 52 ಎ) ಅವರು ಮೊದಲ ವಿಕೆಟ್‌ಗೆ 19 ಓವರ್‌ಗಳಲ್ಲಿ 139 ರನ್‌ ಸೇರಿಸಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಅಭಿಷೇಕ್‌ ಔಟಾದ ಬಳಿಕ ಬಂದ ಧ್ರುವ್‌ ಜುರೇಲ್ 12 ಎಸೆತಗಳಲ್ಲಿ ಒಂದು ಬೌಂಡರಿ, ಎರಡು ಸಿಕ್ಸರ್‌ಗಳ ನೆರವಿನಿಂದ ಅಜೇಯ 21 ರನ್‌ ಗಳಿಸಿದರು. ಸಿಕ್ಸ್‌ ಹೊಡೆದು ಅವರು ಗೆಲುವು ತಂದುಕೊಟ್ಟರು. ಸತತ ಎರಡನೇ ಗೆಲುವು ಪಡೆದ ಭಾರತ, ನಾಲ್ಕು ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಯಶ್‌ ಧುಲ್ ಬಳಗ ಬುಧವಾರ ನಡೆಯಲಿರುವ ಕೊನೆಯ ಲೀಗ್‌ ಪಂದ್ಯದಲ್ಲಿ ಪಾಕಿಸ್ತಾನ ‘ಎ’ ತಂಡವನ್ನು ಎದುರಿಸಲಿದೆ. ಸಂಕ್ಷಿಪ್ತ ಸ್ಕೋರ್: ನೇಪಾಳ 39.2 ಓವರ್‌ಗಳಲ್ಲಿ 167 (ರೋಹಿತ್‌ ಪೌದೆಲ್ 65, ಗುಲ್ಶನ್‌ ಝಾ 38, ನಿಶಾಂತ್‌ ಸಿಂಧು 14ಕ್ಕೆ 4, ರಾಜವರ್ಧನ್ ಹಂಗರ್‌ಗೇಕರ್ 25ಕ್ಕೆ 3, ಹರ್ಷಿತ್‌ ರಾಣಾ 16ಕ್ಕೆ 2) ಭಾರತ ‘ಎ’: 22.1 ಓವರ್‌ಗಳಲ್ಲಿ 1 ವಿಕೆಟ್‌ಗೆ 172 (ಸಾಯಿ ಸುದರ್ಶನ್‌ ಔಟಾಗದೆ 58, ಅಭಿಷೇಕ್‌ ಶರ್ಮಾ 87, ಧ್ರುವ್‌ ಜುರೇಲ್‌ ಔಟಾಗದೆ 21) ಫಲಿತಾಂಶ: ಭಾರತ ‘ಎ’ ತಂಡಕ್ಕೆ 9 ವಿಕೆಟ್‌ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.