ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯ ಆಯ್ಕೆಗಾರರಾಗಿ ಇಂಜಮಾಮ್ ಉಲ್ ಹಕ್ ನೇಮಕ ಕರಾಚಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿಯು(ಪಿಸಿಬಿ) ದಿಗ್ಗಜ ಕ್ರಿಕೆಟಿಗ ಇಂಜಮಮ್ ಉಲ್ ಹಕ್ ಅವರನ್ನು ಮುಖ್ಯ ಆಯ್ಕೆಗಾರರನ್ನಾಗಿ ಮರು ನೇಮಕ ಮಾಡಿದೆ. ಈ ಮೂಲಕ ಎರಡನೇ ಬಾರಿಗೆ ಉನ್ನತ ಹುದ್ದೆಗೆ ಇಂಜಮಾಮ್ ಆವರನ್ನು ಪಿಸಿಬಿ ಆಯ್ಕೆ ಮಾಡಿದೆ. 53 ವರ್ಷದ ಇಂಜಮಾಮ್ 2016 ಮತ್ತು 2019ರ ನಡುವೆ ಪಿಸಿಬಿಯ ಮುಖ್ಯ ಆಯ್ಕೆಗಾರರಾಗಿ ಕೆಲಸ ಮಾಡಿದ್ದರು. 1992ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಅವರು, ಮುಖ್ಯ ಆಯ್ಕೆಗಾರರಾಗಿ ಕೆಲಸ ಮಾಡಲು ಕಳೆದ ವಾರವೇ ಒಪ್ಪಿಕೊಂಡಿದ್ದರು. 120 ಟೆಸ್ಟ್ ಪಂದ್ಯಗಳನ್ನು ಆಡಿರುವ ಇಂಜಮಾಮ್, 49.60 ಸರಾಸರಿಯಲ್ಲಿ 8,830 ರನ್ ಗಳಿಸಿದ್ದಾರೆ. ಇದರಲ್ಲಿ 25 ಶತಕ ಮತ್ತು 46 ಅರ್ಧಶತಕ ಇವೆ . 378 ಏಕದಿನ ಪಂದ್ಯಗಳಿಂದ ಅವರು ಅವರು 11,739 ರನ್ ಸಿಡಿಸಿದ್ದಾರೆ. ಇದರಲ್ಲಿ 10 ಶತಕ ಮತ್ತು 83 ಅರ್ಧಶತಕಗಳಿದ್ದವು. ಕಳೆದ ತಿಂಗಳು ಪಿಸಿಬಿಯ ಮುಖ್ಯ ಆಯ್ಕೆಗಾರ ಹುದ್ದೆಯಿಂದ ಕೆಳಗಿಳಿದ ಹರೂನ್ ರಶೀದ್ ಸ್ಥಾನವನ್ನು ಇಂಜಮಮ್ ತುಂಬಲಿದ್ದಾರೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್‌ ಪಂದ್ಯಾವಳಿಗೆ ತಂಡವನ್ನು ಆಯ್ಕೆ ಮಾಡಬೇಕಾದ ದೊಡ್ಡ ಜವಾಬ್ದಾರಿ ಇಂಜಮಾಮ್ ಅವರ ಮೇಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.