ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್: ನೀರಜ್‌ ಚೋಪ್ರಾ ಮೇಲೆ ನಿರೀಕ್ಷೆ ಬುಡಾಪೆಸ್ಟ್‌: ಭಾರತದ ಜಾವೆಲಿನ್‌ ಥ್ರೋ ಸ್ಪರ್ಧಿ ನೀರಜ್‌ ಚೋಪ್ರಾ ಅವರು ಶನಿವಾರ ಇಲ್ಲಿ ಆರಂಭವಾಗಲಿರುವ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕದ ನಿರೀಕ್ಷೆಯಲ್ಲಿದ್ದಾರೆ. 25 ವರ್ಷದ ಚೋಪ್ರಾ ಅವರು ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ ಹೊರತುಪಡಿಸಿ ಇತರ ಎಲ್ಲ ಪ್ರಮುಖ ಕೂಟಗಳಲ್ಲಿ ಚಿನ್ನ ಗೆದ್ದಿದ್ದಾರೆ. ಆದ್ದರಿಂದ ಈ ಬಾರಿ ಆ ಕೊರತೆ ನೀಗಿಸುವ ವಿಶ್ವಾಸದಲ್ಲಿ ಕಣಕ್ಕಿಳಿಯಲಿದ್ದಾರೆ. ಪುರುಷರ ಜಾವೆಲಿನ್‌ ಥ್ರೋ ಸ್ಪರ್ಧೆಯ ಅರ್ಹತಾ ಸುತ್ತು ಆ.25 ರಂದು ನಡೆಯಲಿದ್ದು, ಫೈನಲ್‌ ಆ.27 ಕ್ಕೆ ನಿಗದಿಯಾಗಿದೆ. ಚೋಪ್ರಾ ಅವರು ಒಲಿಂಪಿಕ್ಸ್‌ (2021, ಟೋಕಿಯೊ), ಏಷ್ಯನ್‌ ಗೇಮ್ಸ್‌ (2018) ಮತ್ತು ಕಾಮನ್‌ವೆಲ್ತ್‌ ಕೂಟದಲ್ಲಿ (2018) ಚಿನ್ನ ಜಯಿಸಿದ್ದಾರೆ. ಕಳೆದ ವರ್ಷ ಡೈಮಂಡ್‌ ಲೀಗ್‌ನಲ್ಲಿ ಚಾಂಪಿಯನ್‌ ಆಗಿದ್ದರು. 2022 ರಲ್ಲಿ ಅಮೆರಿಕದಲ್ಲಿ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದ ಅವರು, ಈ ಬಾರಿ ಚಿನ್ನ ಗೆಲ್ಲುವ ‘ಫೇವರಿಟ್‌’ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಚೋಪ್ರಾ ಅವರು ಚಿನ್ನ ಗೆಲ್ಲುವಲ್ಲಿ ಯಶ ಕಂಡರೆ, ಶೂಟರ್‌ ಅಭಿನವ್‌ ಬಿಂದ್ರಾ ಬಳಿಕ ಒಲಿಂಪಿಕ್ಸ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ನ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಎರಡನೇ ಕ್ರೀಡಾಪಟು ಎನಿಸಲಿದ್ದಾರೆ. ಬಿಂದ್ರಾ ಅವರು 2008ರ ಒಲಿಂಪಿಕ್ಸ್‌ನಲ್ಲಿ ಮತ್ತು 2006ರಲ್ಲಿ ಜಗ್ರೆಬ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಜಯಿಸಿದ್ದರು. ಚೋಪ್ರಾ ಅವರು ಈ ವರ್ಷ ಎರಡು ಪ್ರಮುಖ ಕೂಟಗಳಲ್ಲಿ ಮಾತ್ರ ಪಾಲ್ಗೊಂಡಿದ್ದು, ಎರಡರಲ್ಲೂ ಚಿನ್ನ ಗೆದ್ದಿದ್ದಾರೆ. ದೋಹಾ (ಮೇ 5) ಮತ್ತು ಲುಸಾನ್ (ಜೂನ್‌ 30) ಡೈಮಂಡ್‌ ಲೀಗ್‌ ಕೂಟಗಳಲ್ಲಿ ಅವರು ಅಗ್ರಸ್ಥಾನ ಗಳಿಸಿದ್ದರು. ಇದೀಗ ಎರಡು ತಿಂಗಳ ವಿಶ್ರಾಂತಿ ಮತ್ತು ತರಬೇತಿಯ ಬಳಿಕ ಪ್ರಮುಖ ಕೂಟಕ್ಕೆ ಸಜ್ಜಾಗಿದ್ದಾರೆ. ಗ್ರೆನೇಡಾದ ಆ್ಯಂಡರ್ಸನ್‌ ಪೀಟರ್ಸ್‌, ಜೆಕ್‌ ರಿಪಬ್ಲಿಕ್‌ನ ಯಾಕುಬ್‌ ವದ್ಲೇಚ್ ಮತ್ತು ಜರ್ಮನಿಯ ಜೂಲಿಯನ್‌ ವೆಬೆರ್‌ ಅವರು ಚೋಪ್ರಾಗೆ ಪೈಪೋಟಿ ನೀಡುವ ಸಾಧ್ಯತೆಯಿದೆ. ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಚೋಪ್ರಾ ಅಲ್ಲದೆ ಭಾರತದ ಡಿ.ಪಿ.ಮನು ಮತ್ತು ಕಿಶೋರ್‌ ಜೆನಾ ಅವರೂ ಸ್ಪರ್ಧಿಸಲಿದ್ದಾರೆ. ಪುರುಷರ ಲಾಂಗ್‌ಜಂಪ್‌ನಲ್ಲಿ ಜೆಸ್ವಿನ್‌ ಆಲ್ಡ್ರಿನ್‌ ಮತ್ತು ಮುರಳಿ ಶ್ರೀಶಂಕರ್‌ ಅವರು ಪದಕದ ಭರವಸೆ ಮೂಡಿಸಿದ್ದಾರೆ. ಮೊದಲ ದಿನವಾದ ಶನಿವಾರ 20 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಆಕಾಶ್‌ದೀಪ್‌ ಸಿಂಗ್‌, ವಿಕಾಶ್‌ ಸಿಂಗ್‌ ಮತ್ತು ಪರಮ್‌ಜೀತ್‌ ಸಿಂಗ್‌ ಅವರು ಸ್ಪರ್ಧಿಸುವರು. ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಶೈಲಿ ಸಿಂಗ್‌, ಪುರುಷರ 1,500 ಮೀ. ಓಟದ ಹೀಟ್ಸ್‌ನಲ್ಲಿ ಅಜಯ್‌ ಕುಮಾರ್‌ ಸರೋಜ್‌, ಪುರುಷರ 3,000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಅವಿನಾಶ್‌ ಸಬ್ಳೆ ಕಣಕ್ಕಿಳಿಯುವರು. ಪ್ರವೀಣ್‌ ಚಿತ್ರವೇಲ್, ಅಬ್ದುಲ್ಲಾ ಅಬೂಬಕರ್‌ ಮತ್ತು ಎಲ್ದೋಸ್‌ ಪಾಲ್ ಅವರು ಟ್ರಿಪಲ್‌ಜಂಪ್‌ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸುವರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.