ಅನ್ವಯ್‌ ದ್ರಾವಿಡ್‌ ದ್ವಿಶತಕ ಬೆಂಗಳೂರು: ಅನ್ವಯ್‌ ದ್ರಾವಿಡ್ ಅವರ ಭರ್ಜರಿ ದ್ವಿಶತಕದ ನೆರವಿನಿಂದ ಮಲ್ಯ ಅದಿತಿ ಇಂಟರ್‌ನ್ಯಾಷನಲ್‌ ಸ್ಕೂಲ್‌ ತಂಡ ಕೆಎಸ್‌ಸಿಎ 16 ವರ್ಷದೊಳಗಿನವರ ಅಂತರ ಶಾಲಾ 2ನೇ ಡಿವಿಷನ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 456 ರನ್‌ಗಳಿಂದ ಇನ್ನಿಸ್‌ಫ್ರೀ ಹೌಸ್‌ ಸ್ಕೂಲ್‌ ತಂಡವನ್ನು ಮಣಿಸಿತು. ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಮಲ್ಯ ಅದಿತಿ ತಂಡದವರು ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 526 ರನ್‌ ಗಳಿಸಿದರು. ಅನ್ವಯ್‌ 140 ಎಸೆತಗಳಲ್ಲಿ 49 ಬೌಂಡರಿಗಳ ನೆರವಿನಿಂದ 264 ರನ್‌ ಕಲೆಹಾಕಿದರು. ಯಶಸ್‌ ಶಂಕರ್‌ (101) ಮತ್ತು ಅರ್ಹಾನ್‌ ಜೈ ಸಿಂಗ್ (113) ಅವರು ಶತಕ ಹೊಡೆದರು. ಇನ್ನಿಸ್‌ಫ್ರೀ ಸ್ಕೂಲ್‌ ತಂಡ 19.3 ಓವರ್‌ಗಳಲ್ಲಿ 70 ರನ್‌ಗಳಿಗೆ ಆಲೌಟಾಯಿತು. ಇತರ ಪಂದ್ಯಗಳಲ್ಲಿ ಬಿಜಿಎಸ್‌ ಪಬ್ಲಿಕ್‌ ಶಾಲೆ 469 ರನ್‌ಗಳಿಂದ ಫ್ಲಾರೆನ್ಸ್ ಪಬ್ಲಿಕ್‌ ಶಾಲೆ ವಿರುದ್ಧ; ರಯಾನ್‌ ಇಂಟರ್‌ನ್ಯಾಷನಲ್‌ ಶಾಲೆ 272 ರನ್‌ಗಳಿಂದ ಎಂಇಎಸ್‌ ಕಿಶೋರ ಕೇಂದ್ರ ವಿರುದ್ಧ; ಆರ್‌.ಟಿ.ನಗರದ ಪ್ರೆಸಿಡೆನ್ಸಿ ಶಾಲೆ 324 ರನ್‌ಗಳಿಂದ ನಂದಿನಿ ಬಡಾವಣೆಯ ಪ್ರೆಸಿಡೆನ್ಸಿ ಶಾಲೆ ವಿರುದ್ಧ; ಕೆನ್ಸರಿ ಶಾಲೆ 170 ರನ್‌ಗಳಿಂದ ದಿ ಕೆಥೆಡ್ರಲ್ ಹೈಸ್ಕೂಲ್‌ ವಿರುದ್ಧ; ವಿವಿಎಸ್‌ ಸರ್ದಾರ್‌ ಪಟೇಲ್‌ ಹೈಸ್ಕೂಲ್ 26 ರನ್‌ಗಳಿಂದ ಶ್ರೀಕುಮಾರನ್‌ ಚಿಲ್ಡ್ರನ್ಸ್ ಹೋಮ್ ವಿರುದ್ಧ ಗೆಲುವು ಸಾಧಿಸಿದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.