ಪಾಕ್‌ ತಂಡದ ನೆರವು ಸಿಬ್ಬಂದಿ: ಯಥಾಸ್ಥಿತಿ ಕಾಪಾಡಿದ ಪಿಸಿಬಿ ಲಾಹೋರ್‌/ಕರಾಚಿ (ಪಿಟಿಐ): ಪಾಕಿಸ್ತಾನ ಪುರುಷರ ಕ್ರಿಕೆಟ್‌ ತಂಡದ ತರಬೇತಿ ಮತ್ತು ವ್ಯವಸ್ಥಾಪಕ ಸಿಬ್ಬಂದಿಯನ್ನು ಉಳಿಸಿಕೊಳ್ಳಲಾಗಿದೆ. ಮುಂಬರಲಿರುವ ಅಫ್ಗಾನಿಸ್ಥಾನದ ವಿರುದ್ಧದ ಏಕದಿನ ಸರಣಿ ಹಾಗೂ ಏಷ್ಯಾ ಕಪ್‌ ಟೂರ್ನಿ ಮುಗಿಯುವವರೆಗೂ ಇದೇ ಸಿಬ್ಬಂದಿಯನ್ನು ಮುಂದುವರಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಿರ್ಧರಿಸಿದೆ. ಪಿಸಿಬಿಯ ಈ ನಿರ್ಧಾರದಿಂದಾಗಿ ತಂಡದ ನಿರ್ದೇಶಕ ಮಿಕ್ಕಿ ಆರ್ಥರ್, ಮುಖ್ಯ ಕೋಚ್ ಗ್ರಾಂಟ್ ಬ್ರಾಡ್‌ಬರ್ನ್ ಮತ್ತು ತಂಡದ ಮ್ಯಾನೇಜರ್ ರೆಹಾನ್ ಉಲ್ ಹಕ್ ಅವರು ತಮ್ಮ ಸ್ಥಾನಗಳಲ್ಲಿ ಮುಂದುವರಿಯಲಿದ್ದಾರೆ. ಅಲ್ಲದೆ, ಮಾರ್ನ್ ಮಾರ್ಕೆಲ್ (ಬೌಲಿಂಗ್ ಕೋಚ್), ಆ್ಯಂಡ್ರೂ ಪುಟಿಕ್ (ಬ್ಯಾಟಿಂಗ್ ಕೋಚ್) ಮತ್ತು ಅಫ್ತಾಬ್ ಖಾನ್ (ಫೀಲ್ಡಿಂಗ್ ಕೋಚ್) ಅವರನ್ನೂ ಉಳಿಸಿಕೊಳ್ಳಲಾಗಿದೆ. ಪಿಸಿಬಿಯ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿ ಝಾಕಾ ಅಶ್ರಫ್ ಅಧಿಕಾರ ಸ್ವೀಕರಿಸಿದ ಬಳಿಕ ವಿದೇಶಿ ಕೋಚ್‌ಗಳಿಗೆ ಕೊಕ್‌ ನೀಡಬಹುದು ಎಂದು ಹೇಳಲಾಗಿತ್ತು. ಆದರೆ, ಮುಂದೆ ಪ್ರಮುಖ ಎರಡು ಟೂರ್ನಿಗಳಿರುವಾಗ ಬದಲಾವಣೆ ಮಾಡುವುದು ಸೂಕ್ತವಲ್ಲವೆಂದು ಪಿಸಿಬಿ ಯಥಾಸ್ಥಿತಿ ಕಾಪಾಡಿದೆ ಎಂದು ಮೂಲಗಳು ತಿಳಿಸಿವೆ. ಅಶ್ರಫ್ ಅಧಿಕಾರ ಸ್ವೀಕರಿಸಿದ ಬಳಿಕ ಎರಡು ಬದಲಾವಣೆ ಮಾಡಿದ್ದಾರೆ. ಪಾಕ್‌ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಅವರನ್ನು ಮುಖ್ಯ ಆಯ್ಕೆಗಾರರಾಗಿ‌ ನೇಮಿಸಿದ್ದಾರೆ. ಪಾಕಿಸ್ತಾನದ ಮಹಿಳಾ ತಂಡದ ಕೋಚ್ ಮಾರ್ಕ್ ಕೋಲ್ಸ್ ಅವರಿಗೆ ಕೊಕ್‌ ನೀಡಿದ್ದಾರೆ. ದಹಾನಿಗೆ ಮೌಖಿ‌ಕ ಎಚ್ಚರಿಕೆ ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೆ ತಮ್ಮನ್ನು ಪರಿಗಣಿಸದಿರುವುದನ್ನು ವಿರೋಧಿಸಿ ಟ್ವೀಟ್‌ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದ ಯುವ ವೇಗದ ಬೌಲರ್‌ ಶಹನವಾಜ್ ದಹಾನಿ ಅವರಿಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಮೌಖಿಕ ಎಚ್ಚರಿಕೆ ನೀಡಿದೆ. ಪಾಕಿಸ್ತಾನ ತಂಡವನ್ನು ಘೋಷಿಸಿದ ಕೂಡಲೇ ದಹಾನಿ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು. ಮುಖ್ಯ ಆಯ್ಕೆಗಾರ ಇಂಜಮಾಮ್ ಉಲ್ ಹಕ್ ಮತ್ತು ಮಾಧ್ಯಮಗಳಿಗೆ ತಾನು ಪಾಕಿಸ್ತಾನದ ವೇಗದ ಬೌಲರ್‌ ಎಂದು ತಿಳಿದಿಲ್ಲ ಎಂದು ತೋರುತ್ತದೆ. ಪತ್ರಿಕಾಗೋಷ್ಠಿಯಲ್ಲೂ ಯಾರೂ ಅವರನ್ನು (ಇಂಜಮಾಮ್) ನನ್ನ ಆಯ್ಕೆಯ ಬಗ್ಗೆ ಕೇಳಲಿಲ್ಲ’ ಎಂದು ದಹಾನಿ ಬರೆದುಕೊಂಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.