ಪಿಸಿಬಿ ಆಹ್ವಾನ; ಪಾಕ್‌ಗೆ ತೆರಳಲಿರುವ ರೋಜರ್‌ ಬಿನ್ನಿ, ರಾಜೀವ್‌ ಶುಕ್ಲಾ ಲಾಹೋರ್‌: ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ ಮತ್ತು ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಅವರು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಆಹ್ವಾನದಂತೆ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯ ಕೆಲವು ಪಂದ್ಯಗಳನ್ನು ವೀಕ್ಷಿಸಲು ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ಧಾರೆ. ಏಷ್ಯಾ ಕಪ್‌ ಟೂರ್ನಿಯ ಪಂದ್ಯಗಳನ್ನು ವೀಕ್ಷಿಸಲು ಪಾಕ್‌ಗೆ ಬರುವಂತೆ ಪಿಸಿಬಿ ಇತ್ತೀಚೆಗೆ ಆಹ್ವಾನ ನೀಡಿತ್ತು. ‘ಬಿನ್ನಿ, ಶುಕ್ಲಾ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರು ಶ್ರೀಲಂಕಾದ ಕ್ಯಾಂಡಿಯಲ್ಲಿ ಸೆ.2 ರಂದು ನಡೆಯಲಿರುವ ಭಾರತ– ಪಾಕಿಸ್ತಾನ ಪಂದ್ಯ ವೀಕ್ಷಿಸಲಿದ್ದಾರೆ. ಸೆ.3 ಕ್ಕೆ ಮೂವರೂ ಭಾರತಕ್ಕೆ ವಾಪಸಾಗುವರು. ಆ ಬಳಿಕ ಬಿಸಿಸಿಐ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ವಾಘಾ ಗಡಿ ಮೂಲಕ ಲಾಹೋರ್‌ಗೆ ಪ್ರಯಾಣಿಸುವರು’ ಎಂದು ಮಂಡಳಿಯ ಮೂಲಗಳು ಹೇಳಿವೆ. ಇವರಿಬ್ಬರು ಸೆ.5 ರಂದು ನಡೆಯಲಿರುವ ಅಫ್ಗಾನಿಸ್ತಾನ– ಶ್ರೀಲಂಕಾ ಪಂದ್ಯ ಹಾಗೂ ಮರುದಿನ ನಡೆಯಲಿರುವ ಪಾಕಿಸ್ತಾನದ ಸೂಪರ್‌ ಫೋರ್‌ ಹಂತದ ಮೊದಲ ಪಂದ್ಯ ವೀಕ್ಷಿಸಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.