| ನೇಪಾಳ ವಿರುದ್ಧ ಭಾರತಕ್ಕೆ 10 ವಿಕೆಟ್ ಜಯ; ಸೂಪರ್‌ 4 ಹಂತಕ್ಕೆ ಲಗ್ಗೆ ಪಲ್ಲೆಕೆಲೆ (ಶ್ರೀಲಂಕಾ): ನಾಯಕ ರೋಹಿತ್‌ ಶರ್ಮ ಮತ್ತು ಶುಭಮನ್‌ ಗಿಲ್‌ ಅವರ ಅಜೇಯ ಅರ್ಧಶತಕಗಳ ನೆರವಿನಿಂದ ನೇಪಾಳ ತಂಡವನ್ನು 10 ವಿಕೆಟ್‌ಗಳಿಂದ ಮಣಿಸಿದ ಭಾರತ, ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯ ಸೂಪರ್‌ ಫೋರ್‌ ಹಂತ ಪ್ರವೇಶಿಸಿತು. ಕ್ರಿಕೆಟ್‌ ಲೋಕದಲ್ಲಿ ಅಂಬೆಗಾಲಿಡುತ್ತಿರುವ ನೇಪಾಳ ತಂಡ, ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿ ಭಾರತದ ಬೌಲರ್‌ಗಳನ್ನು ವಿಶ್ವಾಸದಿಂದ ಎದುರಿಸಿ 48.2 ಓವರ್‌ಗಳಲ್ಲಿ 230 ರನ್‌ಗಳ ಗೌರವಾರ್ಹ ಮೊತ್ತ ದಾಖಲಿಸಿತು. ‘ಎ’ ಗುಂಪಿನ ಈ ಪಂದ್ಯದಲ್ಲೂ ಮಳೆ ‘ಆಟ’ವಾಡಿತು. ಇದರಿಂದ ಭಾರತದ ಗೆಲುವಿಗೆ ಡಕ್ವರ್ತ್‌ ಲೂಯಿಸ್‌ ನಿಯಮದ ಪ್ರಕಾರ 23 ಓವರುಗಳಲ್ಲಿ 145 ರನ್‌ಗಳ ಗುರಿ ನಿಗದಿಪಡಿಸಲಾಯಿತು. ರೋಹಿತ್‌ (74 ರನ್; 59 ಎ., 4X6, 6X5) ಮತ್ತು ಗಿಲ್‌ (67 ರನ್‌; 62 ಎ., 4X8, 6X1) ಅವರ ಅಜೇಯ ಆಟದಿಂದ ಭಾರತ ತಂಡ, 20.1 ಓವರ್‌ಗಳಲ್ಲಿ 147 ರನ್ ಗಳಿಸಿ ಗೆದ್ದಿತು. ಬ್ಯಾಟಿಂಗ್‌ನಲ್ಲಿ ತೋರಿದ ಅದೇ ಛಲವನ್ನು ಬೌಲಿಂಗ್‌ನಲ್ಲೂ ತೋರಿಸಲು ನೇಪಾಳಕ್ಕೆ ಸಾಧ್ಯವಾಗಲಿಲ್ಲ. ಇದರಿಂದ ಭಾರತ ತಂಡದ ಗೆಲುವಿನ ಹಾದಿ ಸುಗಮವಾಯಿತು. ಆರಂಭದಲ್ಲಿ ಅಲ್ಪ ತಡಕಾಡಿದ ರೋಹಿತ್‌ ಬಳಿಕ ಲಯ ಕಂಡುಕೊಂಡು ಐದು ಸಿಕ್ಸರ್‌ಗಳನ್ನು ಹೊಡೆದರು. ಭಾರತ ತಂಡ 2.1 ಓವರ್‌ಗಳಲ್ಲಿ 17 ರನ್‌ ಗಳಿಸಿದ್ದಾಗ ಮಳೆ ಸುರಿಯಿತು. ಇದರಿಂದ ಪರಿಷ್ಕೃತ ಗುರಿ ನೀಡಲಾಯಿತು. ಆಸಿಫ್‌, ಕಮಿ ಆಸರೆ: ಇದನ್ನೂ ಮುನ್ನ ಬ್ಯಾಟಿಂಗ್‌ ಮಾಡಲು ಕಳುಹಿಸ್ಪಟ್ಟ ನೇಪಾಳ ತಂಡಕ್ಕೆ ಆರಂಭ ಆಟಗಾರ ಆಸಿಫ್‌ ಶೇಖ್‌ (97 ಎಸೆತಗಳಲ್ಲಿ 58), ಕುಶಲ್ ಭುರ್ತೆಲ್ (38, 25ಎ) ಮತ್ತು ಸೋಮಪಾಲ್ ಕಮಿ (48, 55 ಎ) ಅವರು ಉತ್ತಮ ಕೊಡುಗೆ ನೀಡಿದರು. ಈ ಹಿಂದಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 104 ರನ್‌ಗಳಿಗೆ ಉರುಳಿದ್ದ ನೇಪಾಳ ಈ ಬಾರಿ ಸುಧಾರಿತ ಪ್ರದರ್ಶನ ನೀಡಿ ಮೊದಲ 10 ಓವರುಗಳಲ್ಲಿ ಒಂದು ವಿಕೆಟ್‌ಗೆ 65 ರನ್‌ ಗಳಿಸಿ ಉತ್ತಮ ಆರಂಭ ಮಾಡಿತು. ಕುಶಲ್ ಧೈರ್ಯದಿಂದ ಬ್ಯಾಟ್‌ ಬೀಸಿದರು. ಅವರ 25 ಎಸೆತಗಳ ಇನಿಂಗ್ಸ್‌ನಲ್ಲಿ ಎರಡು ಸಿಕ್ಸರ್‌, ಮೂರು ಬೌಂಡರಿಗಳಿದ್ದವು. ಕುಶಲ್‌ಗೆ ಎರಡು ಜೀವದಾನಗಳೂ ದೊರಕಿದ್ದವು. ಮೊದಲ ಓವರ್‌ನಲ್ಲೇ ಶ್ರೇಯಸ್‌ ಅಯ್ಯರ್‌ ಕ್ಯಾಚ್‌ ಬಿಟ್ಟರು. ಏಳು ರನ್‌ ಗಳಿಸಿದ್ದಾಗ, ಕೀಪರ್‌ ಇಶಾನ್ ಕಿಶನ್ ಜೀವದಾನ ನೀಡಿದರು. ಎರಡೂ ಬಾರಿ ಮಧ್ಯಮ ವೇಗಿ ಮೊಹಮ್ಮದ್‌ ಶಮಿ ಅವರಿಗೆ ನಷ್ಟವಾಯಿತು. ಶಾರ್ದೂಲ್‌ ಕೊನೆಗೂ ಭಾರತಕ್ಕೆ ಯಶಸ್ಸು ಗಳಿಸಿಕೊಟ್ಟರು. ಭುರ್ತೆಲ್‌ ಅವರ ಬ್ಯಾಟಿನ ಅಂಚಿಗೆ ತಗುಲಿದ ಚೆಂಡನ್ನು ಹಿಡಿಯುವಲ್ಲಿ ವಿಕೆಟ್‌ ಕೀಪರ್‌ ಕಿಶನ್ ಈ ಬಾರಿ ಎಡವಲಿಲ್ಲ. ನೇಪಾಳದ ಮಧ್ಯಮ ಕ್ರಮಾಂಕದ ಆಟಗಾರರು ರವೀಂದ್ರ ಜಡೇಜಾ (40ಕ್ಕೆ3) ಅವರ ಸ್ಪಿನ್‌ ದಾಳಿ ಎದುರು ನೆಲೆಯೂರಲು ಆಗಲಿಲ್ಲ. ಉತ್ತಮ ಆರಂಭದ ನಂತರ ತಂಡ ಒಂದು ಹಂತದಲ್ಲಿ 101 ರನ್‌ಗಳಾಗುವಷ್ಟರಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಅನುಭವಿ ಜಡೇಜಾ ಅವರು ನಾಯಕ ರೋಹಿತ್‌ ಪೌದೆಲ್, ಕುಶಲ್‌ ಮಲ್ಲ ಮತ್ತು ಭೀಮ್‌ ಶಾರ್ಕಿ ಅವರ ವಿಕೆಟ್‌ಗಳನ್ನು ಪಡೆದು ಎದುರಾಳಿ ತಂಡಕ್ಕೆ ಲಗಾಮು ಹಾಕಿದರು. ಎಡಗೈ ಸ್ಪಿನ್ನರ್‌ ಕುಲದೀಪ್ ಯಾದವ್ (34/0) ನಿರೀಕ್ಷಿತ ಅಪಾಯ ಒಡ್ಡಲಿಲ್ಲ. ದೀಪೇಂದ್ರ ಸಿಂಗ್ ಐರಿ (29) ಮತ್ತು ಸೋಮಪಾಲ್ ಕಮಿ ಏಳನೇ ವಿಕೆಟ್‌ಗೆ 50 ರನ್‌ ಸೇರಿಸಿ ತಂಡ 200ರ ಗಡಿ ತಲುಪಲು ನೆರವಾದರು. ಜಸ್‌ಪ್ರೀತ್ ಬೂಮ್ರಾ ಇಲ್ಲದೇ ಭಾರತದ ಬೌಲರ್‌ಗಳ ಇತಿಮಿತಿಯೂ ಈ ಪಂದ್ಯದಲ್ಲಿ ಬಯಲಾಯಿತು. ಸಂಕಿಪ್ತ ಸ್ಕೋರು ನೇಪಾಳ: 48.2 ಓವರುಗಳಲ್ಲಿ 230 (ಕುಶಲ್ ಭುರ್ತೆಲ್ 38, ಆಸಿಫ್‌ ಶೇಖ್‌ 58, ಗುಲ್ಶನ್ ಝಾ 23, ದೀಪೇಂದ್ರ ಸಿಂಗ್‌ ಐರಿ 29, ಸೋಮಪಾಲ್ ಕಮಿ 48; ಶಮಿ 29ಕ್ಕೆ1, ಸಿರಾಜ್ 61ಕ್ಕೆ3, ಹಾರ್ದಿಕ್ ಪಾಂಡ್ಯ 34ಕ್ಕೆ1, ಶಾರ್ದೂಲ್ ಠಾಕೂರ್ 26ಕ್ಕೆ1, ರವೀಂದ್ರ ಜಡೇಜ 40ಕ್ಕೆ3) ಭಾರತ: 20.1 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 147 (ರೋಹಿತ್‌ ಶರ್ಮ ಔಟಾಗದೆ 74, ಶುಭಮನ್‌ ಗಿಲ್‌ ಔಟಾಗದೆ 67) ಫಲಿತಾಂಶ: ಭಾರತಕ್ಕೆ 10 ವಿಕೆಟ್‌ ಗೆಲುವು (ಡಿಎಲ್‌ಎಸ್‌ ಅನ್ವಯ) ಇಂದಿನ ಪಂದ್ಯ ಅಫ್ಗಾನಿಸ್ತಾನ– ಶ್ರೀಲಂಕಾ (ಮಧ್ಯಾಹ್ನ 3) ಸ್ಥಳ: ಲಾಹೋರ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.