ವಿಶ್ವಕಪ್‌ ಬಳಿಕ ಏಕದಿನ ಕ್ರಿಕೆಟ್‌ಗೆ ಕ್ವಿಂಟನ್ ಡಿಕಾಕ್‌ ನಿವೃತ್ತಿ ಜೊಹಾನೆಸ್‌ಬರ್ಗ್: ದಕ್ಷಿಣ ಆಫ್ರಿಕಾದ ವಿಕೆಟ್‌ಕೀಪರ್‌ ಬ್ಯಾಟರ್ ಕ್ವಿಂಟನ್‌ ಡಿಕಾಕ್‌ ಅವರು ಮುಂಬರುವ ವಿಶ್ವಕಪ್‌ ಬಳಿಕ ಏಕದಿನ ಕ್ರಿಕೆಟ್‌ಗೆ ಗುಡ್‌ಬೈ ಹೇಳಲಿದ್ದಾರೆ. ಡಿಕಾಕ್‌ ಅವರ ನಿವೃತ್ತಿ ನಿರ್ಧಾರವನ್ನು ಕ್ರಿಕೆಟ್‌ ದಕ್ಷಿಣ ಆಫ್ರಿಕಾ (ಸಿಎಸ್‌ಎ) ತನ್ನ ‘ಎಕ್ಸ್‌’ ಖಾತೆಯಲ್ಲಿ ಪ್ರಕಟಿಸಿದೆ. ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ ಟೂರ್ನಿಗೆ ಸಿಎಸ್‌ಎ 15 ಸದಸ್ಯರ ತಂಡವನ್ನು ಪ್ರಕಟಿಸಿದ ಬೆನ್ನಲ್ಲೇ ಡಿಕಾಕ್‌ ಅವರ ನಿರ್ಧಾರ ಹೊರಬಿದ್ದಿದೆ. ದಕ್ಷಿಣ ಆಫ್ರಿಕಾ ತಂಡವನ್ನು ತೆಂಬಾ ಬವುಮಾ ಮುನ್ನಡೆಸಲಿದ್ದಾರೆ. 30 ವರ್ಷದ ಡಿಕಾಕ್‌ 2021ರ ಡಿಸೆಂಬರ್‌ನಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಪ್ರಕಟಿಸಿ ಅಚ್ಚರಿ ಉಂಟುಮಾಡಿದ್ದರು. ಕುಟುಂಬದ ಜತೆ ಹೆಚ್ಚಿನ ಸಮಯ ಕಳೆಯುವ ಉದ್ದೇಶದಿಂದ ಈ ತೀರ್ಮಾನ ತೆಗೆದುಕೊಂಡದ್ದಾಗಿ ಹೇಳಿದ್ದರು. 54 ಟೆಸ್ಟ್‌ಗಳನ್ನು ಆಡಿರುವ ಅವರು 3,300 ರನ್‌ ಗಳಿಸಿದ್ದಾರೆ. ಇದುವರೆಗೆ 140 ಏಕದಿನ ಮತ್ತು 80 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಈ ಎರಡು ಮಾದರಿಗಳಲ್ಲಿ ಕ್ರಮವಾಗಿ 5,966 ಹಾಗೂ 2,277 ರನ್‌ ಪೇರಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.