ಏಕದಿನ ರ್‍ಯಾಂಕಿಂಗ್‌: ಅಗ್ರಸ್ಥಾನಕ್ಕೇರಿದ ಆಸ್ಟ್ರೇಲಿಯಾ ದುಬೈ (ಪಿಟಿಐ): ಆಸ್ಟ್ರೇಲಿಯಾ ತಂಡದವರು ಐಸಿಸಿ ಏಕದಿನ ಕ್ರಿಕೆಟ್‌ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. ಅಲ್ಪ ಅವಧಿಗೆ ಅಗ್ರಸ್ಥಾನದಲ್ಲಿದ್ದ ಪಾಕಿಸ್ತಾನ ತಂಡ ಮತ್ತೆ ಎರಡನೇ ಸ್ಥಾನಕ್ಕೆ ಇಳಿದಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಶನಿವಾರ ನಡೆದ ಎರಡನೇ ಏಕದಿನ ಕ್ರಿಕೆಟ್‌ ಪಂದ್ಯವನ್ನು ಗೆದ್ದುಕೊಂಡದ್ದು, ಆಸ್ಟ್ರೇಲಿಯಾ (121 ರೇಟಿಂಗ್‌ ಪಾಯಿಂಟ್ಸ್) ಅಗ್ರಸ್ಥಾನಕ್ಕೇರಲು ಕಾರಣ. ಪಾಕಿಸ್ತಾನ (120) ಮತ್ತು ಭಾರತ ತಂಡಗಳು (114) ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನಗಳಲ್ಲಿವೆ. ಬ್ಲೋಮ್‌ಫಾಂಟೇನ್‌ನಲ್ಲಿ ನಡೆದ ಪಂದ್ಯವನ್ನು ಮಿಚೆಲ್‌ ಮಾರ್ಷ್‌ ಬಳಗ 123 ರನ್‌ಗಳಿಂದ ಜಯಿಸಿತು. ಮೊದಲು ಬ್ಯಾಟ್‌ ಮಾಡಿದ್ದ ಆಸ್ಟ್ರೇಲಿಯಾ, ಡೇವಿಡ್‌ ವಾರ್ನರ್‌ (106) ಮತ್ತು ಮಾರ್ನಸ್‌ ಲಾಬುಶೇನ್‌ (124) ಅವರ ಶತಕಗಳ ನೆರವಿನಿಂದ 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 392 ರನ್‌ ಗಳಿಸಿತು. ಸವಾಲಿನ ಗುರಿ ಬೆನ್ನಟ್ಟಿದ ಆತಿಥೇಯ ತಂಡ 41.5 ಓವರ್‌ಗಳಲ್ಲಿ 269 ರನ್‌ಗಳಿಗೆ ಆಲೌಟಾಯಿತು. ಆರಂಭಿಕ ಆಟಗಾರರಾದ ಕ್ವಿಂಟನ್‌ ಡಿಕಾಕ್ (45), ತೆಂಬಾ ಬವುಮಾ (46) ಹಾಗೂ ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಕ್‌ ಕ್ಲಾಸೆನ್‌ ಹಾಗೂ ಡೇವಿಡ್‌ ಮಿಲ್ಲರ್‌ (ತಲಾ 49) ಮಾತ್ರ ಅಲ್ಪ ಹೋರಾಟ ತೋರಿದರು. ಆ್ಯಡಂ ಜಂಪಾ 48 ರನ್‌ಗಳಿಗೆ 4 ವಿಕೆಟ್‌ ಪಡೆದರು. ಆಸ್ಟ್ರೇಲಿಯಾ ತಂಡ ಐದು ಪಂದ್ಯಗಳ ಸರಣಿಯಲ್ಲಿ 2–0 ಯಿಂದ ಮುನ್ನಡೆ ಸಾಧಿಸಿದೆ. ಮೂರನೇ ಪಂದ್ಯ ಮಂಗಳವಾರ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.