| ಶುಭಮನ್ ಗಿಲ್‌ಗೆ ಜ್ವರ, ಡೆಂಗಿ ಶಂಕೆ ಚೆನ್ನೈ: ಉತ್ತಮ ಫಾರ್ಮ್‌ನಲ್ಲಿರುವ ಆರಂಭ ಆಟಗಾರ ಶುಭಮನ್ ಗಿಲ್ ಅವರು ಶಂಕಿತ ಡೆಂಗಿ ಜ್ವರದಿಂದ ಬಳಲುತ್ತಿದ್ದು ಭಾನುವಾರ (ಅ.8) ಆಸ್ಟ್ರೇಲಿಯಾ ವಿರುದ್ಧ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಇದು ತಂಡದ ಚಿಂತೆಗೆ ಕಾರಣವಾಗಿದೆ. ಗಿಲ್ ಅವರ ಜ್ವರದ ಸ್ವರೂಪದ ಬಗ್ಗೆ ಬಿಸಿಸಿಐ ಇದುವರೆಗೆ ಖಚಿತಪಡಿಸಿಲ್ಲ. ಗಿಲ್ ಆಡದಿದ್ದಲ್ಲಿ ಇಶಾನ್ ಕಿಶನ್ ಅವರು ಇನಿಂಗ್ಸ್‌ ಆರಂಭಿಸಬಹುದು. ‘ಅವರಿಗೆ ಜ್ವರವಿದೆ. ವೈದ್ಯರ ತಂಡ ಆವರ ಆರೋಗ್ಯದ ಮೇಲೆ ನಿಗಾ ಇಟ್ಟಿದೆ. ಬೇಗ ಚೇತರಿಸಿಕೊಳ್ಳುವ ವಿಶ್ವಾಸವಿದೆ. ವೈದ್ಯರ ತಂಡದಿಂದ ಹೆಚ್ಚಿನ ವಿವರಕ್ಕೆ ಕಾಯುತ್ತಿದ್ದೇವೆ’ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ. ಏಕದಿನ ಪಂದ್ಯಗಳಲ್ಲಿ ಇತ್ತೀಚೆಗೆ ರನ್ ಹೊಳೆ ಹರಿಸುತ್ತಿರುವ ಗಿಲ್, ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ಶುಕ್ರವಾರ ಮತ್ತೆ ಡೆಂಗಿ ಪರೀಕ್ಷೆ ನಡೆಸಿದ ನಂತರ ಅವರ ಮೊದಲ ಪಂದ್ಯದಲ್ಲಿ ಆಡುವ ಬಗ್ಗೆ ಅಂತಿಮ ನಿರ್ಧಾರಕ್ಕೆ ತಂಡ ಬರಲಿದೆ ಎಂದು ಬಿಸಿಸಿಐನ ಮೂಲ ಪಿಟಿಐಗೆ ತಿಳಿಸಿದೆ. ಡೆಂಗೆ ಖಚಿತವಾದಲ್ಲಿ ಅವರು ಕೆಲವು ಪಂದ್ಯಗಳನ್ನು ಕಳೆದುಕೊಳ್ಳಲೂಬಹುದು. ಡೆಂಗಿ ನಂತರ ಅರ್ಹತೆ ಮರಳಿ ಪಡೆಯಲು 7 ರಿಂದ 10 ದಿನ ಬೇಕಾಗಬಹುದು. ಚಿಕಿತ್ಸೆ ದೀರ್ಘವಾದಲ್ಲಿ ಅವರು ಅಫ್ಗಾನಿಸ್ತಾನ (ಅ.11) ಮತ್ತು ಪಾಕಿಸ್ತಾನ (ಅ. 14) ವಿರುದ್ಧ ಪಂದ್ಯಗಳಿಗೂ ಅಲಭ್ಯರಾಗಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.