ಹಿಟ್‌ಮ್ಯಾನ್ ರೋಹಿತ್ ಶರ್ಮಾ ಆಟ ಸೂಪರ್ ಹಿಟ್: ದಾಖಲೆಗಳ ಪೇರಿಸಿದ ರೋಹಿತ್ ಶರ್ಮಾ ನವದೆಹಲಿ: ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರ ಸಿಡಿಲಬ್ಬರದ ಬ್ಯಾಟಿಂಗ್‌ಗೆ ದೇಶದ ರಾಜಧಾನಿಯ ಕ್ರೀಡಾಂಗಣ ವೇದಿಕೆಯಾಯಿತು. ಬುಧವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ರೋಹಿತ್ ಮಿಂಚಿನ ಶತಕದ ಮುಂದೆ ಅಫ್ಗಾನಿಸ್ತಾನ ತಂಡವು ಬಸವಳಿಯಿತು. ಪಂದ್ಯದಲ್ಲಿ ಇನ್ನೂ 90 ಎಸೆತಗಳು ಬಾಕಿಯಿರುವಾಗಲೇ 8 ವಿಕೆಟ್‌ಗಳಿಂದ ಜಯಿಸಿತು. 272 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭಿಕ ಜೋಡಿ ರೋಹಿತ್ (131; 84ಎ) ಮತ್ತು ಇಶಾನ್ ಕಿಶನ್ (47; 47ಎ) ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 156 ರನ್‌ಗಳನ್ನು ಸೇರಿಸಿದರು. ಇದರಿಂದಾಗಿ ತಂಡವು 35 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 273 ರನ್ ಗಳಿಸಿತು. ಇದಕ್ಕಾಗಿ ಅವರಿಬ್ಬರೂ ಸೇರಿ 112 ಎಸೆತಗಳನ್ನು ಆಡಿದರು. ಇದರಲ್ಲಿ ರೋಹಿತ್ ಅವರದ್ದೇ ಸಿಂಹಪಾಲು. ಇಶಾನ್ ಹೆಚ್ಚು ಶ್ರಮಪಡದೇ ರೋಹಿತ್ ಆಟದ ಸೊಬಗನ್ನು ಸವಿದರು. ಮುಂಬೈಕರ್ ರೋಹಿತ್ 63 ಎಸೆತಗಳಲ್ಲಿ ಶತಕದ ಗಡಿ ದಾಟಿದರು. ವಿಶ್ವಕಪ್ ಕ್ರಿಕೆಟ್‌ನಲ್ಲಿ ಇದು ಅವರ ಏಳನೇ ಶತಕ. ಇದರೊಂದಿಗೆ ಅವರು ಸಚಿನ್ ತೆಂಡೂಲ್ಕರ್ (6) ದಾಖಲೆಯನ್ನು ಮೀರಿದರು. ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಇದು ಅವರಿಗೆ 31ನೇ ಶತಕವಾಗಿದೆ. ಈ ಪಂದ್ಯದಲ್ಲಿ ಐದು ಸಿಕ್ಸರ್ ಬಾರಿಸಿದ ರೋಹಿತ್ ಮೂರು ಮಾದರಿಗಳ ಕ್ರಿಕೆಟ್‌ನಲ್ಲಿ ಒಟ್ಟು 556 ಸಿಕ್ಸರ್ ದಾಖಲಿಸಿದರು. ಇದರೊಂದಿಗೆ ಕ್ರಿಸ್ ಗೇಲ್ (553) ದಾಖಲೆ ಮುರಿದರು. ಅಫ್ಗನ್ ಬೌಲರ್‌ಗಳ ಶಾಟ್‌ ಪಿಚ್ ಎಸೆತಗಳು, ಕಟರ್, ಸ್ಪಿನ್‌ ಎಸೆತಗಳು ರೋಹಿತ್ ಲಯದ ಮುಂದೆ ಬಲ ಕಳೆದುಕೊಂಡವು. ಬೌಂಡರಿಗೆರೆಯಾಚೆ ಹೋಗಿ ಬಿದ್ದವು. ಚೆನ್ನೈನಲ್ಲಿ ಆಸ್ಟ್ರೇಲಿಯಾ ಎದುರು ರೋಹಿತ್ ಮತ್ತು ಇಶಾನ್ ಇಬ್ಬರೂ ಶೂನ್ಯ ಸುತ್ತಿದ್ದರು. ಆದರೆ ಇಲ್ಲಿ ಮಿಂಚಿದರು. ಅರ್ಧಶತಕದತ್ತ ಹೆಜ್ಜೆಯಿಟ್ಟಿದ ಇಶಾನ್ ವಿಕೆಟ್‌ ಗಳಿಸಿದ ರಶೀದ್ ಜೊತೆಯಾಟವನ್ನು ಮರೆತರು. ರೋಹಿತ್ ಜೊತೆಗೂಡಿದ ವಿರಾಟ್ ಕೊಹ್ಲಿ ರನ್‌ ಗಳಿಕೆಯ ವೇಗವನ್ನು ಮುಂದುವರಿಸಿದರು. 26ನೇ ಓವರ್‌ನಲ್ಲಿ ರೋಹಿತ್ ವಿಕೆಟ್ ಗಳಿಸಿದ ರಶೀದ್ ನಿಟ್ಟುಸಿರುಬಿಟ್ಟರು. ಆದರೆ ವಿರಾಟ್ ಆಟ ರಂಗೇರಿತು. ಅವರು ಅಜೇಯ ಅರ್ಧಶತಕ (55; 56ಎ) ಗಳಿಸಿದರು. ಶ್ರೇಯಸ್ ಅಯ್ಯರ್ (ಔಟಾಗದೆ 25) ಜೊತೆಗೂಡಿ ತಂಡವನ್ನು ಗೆಲುವಿನ ಗಡಿ ಮುಟ್ಟಿಸಿದರು. ಹಷ್ಮತ್–ಅಜ್ಮತ್ ಜೊತೆಯಾಟ: ಟಾಸ್ ಗೆದ್ದ ಅಫ್ಗನ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕ ಹಷ್ಮತ್‌ಉಲ್ಲಾ ಶಾಹೀದಿ (80; 88ಎ) ಮತ್ತು ಅಜ್ಮತ್‌ಉಲ್ಲಾ ಒಮರ್‌ಝೈ (62; 69ಎ) ಅವರ ಅರ್ಧಶತಕಗಳ ಬಲದಿಂದ 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 272 ರನ್‌ ಗಳಿಸಿತು. ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬೂಮ್ರಾ ಹಾಗೂ ಶಾರ್ದೂಲ್ ಠಾಕೂರ್ ಅವರ ದಾಳಿಯಿಂದಾಗಿ ಅಫ್ಗನ್ ತಂಡವು ಆರಂಭದಲ್ಲಿ ಆಘಾತ ಅನುಭವಿಸಿತ್ತು. 63 ಎಸೆತಗಳಿಗೆ ಮೂರು ವಿಕೆಟ್ ಕಳೆದುಕೊಂಡಿತ್ತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಹಷ್ಮತ್ ಮತ್ತು ಅಜ್ಮತ್ ಮಿಂಚಿದರು. 4ನೇ ವಿಕೆಟ್ ಜೊತೆಯಾಟದಲ್ಲಿ 121 ರನ್‌ ಸೇರಿಸಿದರು. ಇದರಿಂದಾಗಿ ತಂಡಕ್ಕೆ ಹೋರಾಟದ ಮೊತ್ತ ಗಳಿಸಿತು. ಒಂದು ಹಂತದಲ್ಲಿ ತಂಡವು 300 ರನ್‌ಗಳ ಗಡಿ ದಾಟುವ ಸಾಧ್ಯತೆಯೂ ಕಂಡುಬಂದಿತ್ತು. ಆದರೆ ಬೂಮ್ರಾ (39ಕ್ಕೆ4) ಹಾಗೂ ಕುಲದೀಪ್ ಯಾದವ್ 40ಕ್ಕೆ1) ರನ್‌ ಗಳಿಕೆಗೆ ಕಡಿವಾಣ ಹಾಕಿದರು. ಅವರಿಗೆ ಜಡೇಜ ಕೂಡ ಉತ್ತಮ ಜೊತೆ ನೀಡಿದರು. ವೇಗಿ ಮೊಹಮ್ಮದ್ ಸಿರಾಜ್ ಒಂಬತ್ತು ಓವರ್‌ಗಳಲ್ಲಿ 76 ರನ್‌ ನೀಡಿ ದುಬಾರಿಯಾದರು. ಅವರು ಒಂದೂ ವಿಕೆಟ್ ಪಡೆಯಲಿಲ್ಲ. ಕೊಹ್ಲಿಗೆ ಬಡ್ತಿ ಭಾರತದ ವಿರಾಟ್ ಕೊಹ್ಲಿ ಐಸಿಸಿ ಬುಧವಾರ ಪ್ರಕಟಿಸಿದ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಎರಡು ಸ್ಥಾನ ಬಡ್ತಿ ಪಡೆದು, ಏಳನೇ ಸ್ಥಾನಕ್ಕೆ ತಲುಪಿದ್ದಾರೆ. ವಿಶ್ವಕಪ್‌ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಕೊಹ್ಲಿ 85 ರನ್‌ ಗಳಿಸಿದ್ದರು. ಅದೇ ಪಂದ್ಯದಲ್ಲಿ ಔಟಾಗದೆ 97 ರನ್‌ ಗಳಿಸಿದ್ದ ಕೆ.ಎಲ್‌. ರಾಹುಲ್‌ 15 ಸ್ಥಾನಗಳ ಬಡ್ತಿಯೊಂದಿಗೆ 19ನೇ ಸ್ಥಾನ ಪಡೆದಿದ್ದಾರೆ. ಬೌಲರ್‌ಗಳ ಪೈಕಿ ಮೊಹಮ್ಮದ್ ಸಿರಾಜ್ ಅಗ್ರಸ್ಥಾನದಿಂದ 2ನೇ ಸ್ಥಾನಕ್ಕೆ ಜಾರಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.