ಅತ್ಯಧಿಕ ಸಿಕ್ಸರ್‌ಗಳ ದಾಖಲೆ: ಗೇಲ್‌ ಅವರ ಪ್ರೇರಣೆಯೂ ಇದೆ– ರೋಹಿತ್ ನವದೆಹಲಿ: ಕ್ರಿಸ್‌ ಗೇಲ್‌ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಿಕ್ಸರ್‌ಗಳ ದಾಖಲೆಯನ್ನು ಬುಧವಾರ ಮುರಿದಿರುವ ರೋಹಿತ್ ಶರ್ಮಾ ಅವರು ವೆಸ್ಟ್‌ ಇಂಡೀಸ್‌ ಎಡಗೈ ಆಟಗಾರನೇ ತಮಗೆ ಪ್ರೇರಣೆ ಎಂದಿದ್ದಾರೆ. ‘ದಾಖಲೆಯ ಈ ಯಾನದಲ್ಲಿ ಕೆಲಮಟ್ಟಿಗೆ ಯುನಿವರ್ಸ್‌ ಬಾಸ್‌ (ಗೇಲ್‌) ಅವರಿಂದಲೇ ಪ್ರೇರಣೆ ಪಡೆದಿದ್ದೇನೆ’ ಎಂದು ಹೇಳಿದ್ದಾರೆ. ಅಫ್ಗಾನಿಸ್ತಾನ ವಿರುದ್ಧ ದೆಹಲಿಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್‌ನಲ್ಲಿ 131 ರನ್ ಹೊಡೆದ ರೋಹಿತ್ ಆ ಇನಿಂಗ್ಸ್‌ನಲ್ಲಿ ಐದು ಸಿಕ್ಸರ್‌ಗಳನ್ನು ಬಾರಿಸಿದ್ದರು. ಮೂರೂ ಮಾದರಿಗಳಲ್ಲಿ ಅವರು ಹೊಡೆದ ಸಿಕ್ಸರ್‌ಗಳ ಸಂಖ್ಯೆ 556ಕ್ಕೆ ಏರಿದೆ. ಇದು ವಿಂಡೀಸ್ ದೈತ್ಯ ಆಟಗಾರನಿಗಿಂತ ಮೂರು ಹೆಚ್ಚು. ರೋಹಿತ್, ಗೇಲ್‌ ಅವರಿಗಿಂತ 30 ಕಡಿಮೆ ಪಂದ್ಯಗಳಲ್ಲಿ, ಅಂದರೆ 453 ಪಂದ್ಯಗಳಲ್ಲಿ ಈ ಸಾಧನೆಗೈದಿದ್ದಾರೆ. ‘ಯುನಿವರ್ಸ್‌ ಬಾಸ್‌ ಅಂದರೆ ಯುನಿವರ್ಸ್‌ ಬಾಸ್‌. ನಾನು ಅವರಿಂದ ಸ್ಫೂರ್ತಿ ಪಡೆದಿರುವೆ. ಇತ್ತೀಚಿನ ವರ್ಷಗಳಲ್ಲಿ ಎಲ್ಲೆಡೆ ಸಿಕ್ಸರ್‌ ಎತ್ತುವ ಯಂತ್ರದಂತೆ ಅವರು ಆಡಿರುವುದನ್ನು ನಾವು ನೋಡಿದ್ದೇವೆ’ ಎಂದು ಗೇಲ್ ಬಗ್ಗೆ ರೋಹಿತ್ ಮೆಚ್ಚುಗೆಯ ಮಾತನ್ನಾಡಿದ್ದಾರೆ. ‘ನಾವು ಒಂದೇ ನಂಬರ್‌ನ (45) ಜರ್ಸಿ ಧರಿಸುತ್ತೇವೆ. ಈ ಸಂಖ್ಯೆಯ ಜರ್ಸಿಯಿಂದ ದಾಖಲೆ ಆಗಿರುವುದರಿಂದ ಅವರಿಗೂ ಖುಷಿಯಾಗಿರಬಹುದೆಂದು ನನಗೆ ವಿಶ್ವಾಸವಿದೆ’ ಎಂದು ಬಿಸಿಸಿಐ ಪೋಸ್ಟ್‌ ಮಾಡಿದ ವಿಡಿಯೊದಲ್ಲಿ ರೋಹಿತ್ ಹೇಳಿದ್ದಾರೆ. ಸಿಕ್ಸರ್‌ ಹೊಡೆಯುವ ಕೌಶಲದ ಹಿಂದೆ ಸಾಕಷ್ಟು ಶ್ರಮ ಹಾಕಿದ್ದೇನೆ ಎಂದು 36 ವರ್ಷದ ‘ಹಿಟ್‌ಮ್ಯಾನ್‌’ ಹೇಳಿದ್ದಾರೆ. ಬ್ಯಾಟ್ಸ್‌ಮನ್‌ ಸ್ನೇಹಿ ಅಂಕಣದಲ್ಲಿ ಅಫ್ಗಾನಿಸ್ತಾನವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿರುವ ಬೌಲರ್‌ಗಳ ಪ್ರಯತ್ನಕ್ಕೆ ಅವರು ಮೆಚ್ಚುಗೆ ಸೂಚಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.