ಐಸಿಸಿ ಕ್ರಮಾಂಕ ಪಟ್ಟಿ: ಏಳನೇ ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ ದುಬೈ (ಪಿಟಿಐ): ಭಾರತದ ಬ್ಯಾಟಿಂಗ್ ತಾರೆ ವಿರಾಟ್‌ ಕೊಹ್ಲಿ ಅವರು ಬುಧವಾರ ಪ್ರಕಟವಾದ ಐಸಿಸಿ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡು ಸ್ಥಾನ ಬಡ್ತಿ ಕಂಡಿದ್ದು ಏಳನೇ ಸ್ಥಾನಕ್ಕೇರಿದ್ದಾರೆ. ಚೆನ್ನೈನಲ್ಲಿ ನಡೆದ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗಳಿಸಿದ ಅಮೋಘ 85 ರನ್‌ಗಳ ಸಾಧನೆಯಿಂದ ಈ ಬಡ್ತಿ ದೊರಕಿದೆ. ಕೆ.ಎಲ್‌.ರಾಹುಲ್ ಜೊತೆ ಅವರ ಉಪಯುಕ್ತ ಜೊತೆಯಾಟ ಭಾರತದ ಆರು ವಿಕೆಟ್‌ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು. ಆ ಪಂದ್ಯದಲ್ಲಿ ಅಜೇಯ 97 ರನ್ ಗಳಿಸಿದ್ದ ರಾಹುಲ್ 15 ಸ್ಥಾನಗಳಷ್ಟು ಮೇಲೇರಿ 19ನೇ ಸ್ಥಾನಕ್ಕೆ ಜಿಗಿದಿದ್ದಾರೆ. ರ‍್ಯಾಂಕಿಂಗ್ ಬುಧವಾರ ಪ್ರಕಟವಾಗಿರುವ ಕಾರಣ ಅಫ್ಗಾನಿಸ್ತಾನದ ವಿರುದ್ಧ ಕೊಹ್ಲಿ ಗಳಿಸಿದ ಅಜೇಯ 55 ರನ್‌ಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ವಿಶ್ವಕಪ್‌ನ ಮೊದಲ ಎಂಟು ಪಂದ್ಯಗಳಲ್ಲಿ ಹತ್ತು ಶತಕಗಳು ದಾಖಲಾಗಿರುವ ಕಾರಣ ರ್‍ಯಾಂಕಿಂಗ್‌ನಲ್ಲಿ ಸ್ವಲ್ಪ ಏರುಪೇರುಗಳು ಆಗಿವೆ ಎಂದು ಐಸಿಸಿ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಬ್ಯಾಟರ್‌ಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಡೇವಿಡ್ ಮಲಾನ್ ಎಂಟನೇ ಸ್ಥಾನದಲ್ಲಿದ್ದಾರೆ ಮತ್ತು ಪಾಕಿಸ್ತಾನದ ಇಮಾಂ ಉಲ್ ಹಕ್ 9ನೇ ಸ್ಥಾನದಲ್ಲಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಮೊಹಮ್ಮದ್ ಸಿರಾಜ್ ಎರಡನೇ ಸ್ಥಾನಕ್ಕೆ ಸರಿದಿದ್ದಾರೆ. ಅವರು ಕೆಲಕಾಲ ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್‌ ಜೊತೆ ಅಗ್ರಸ್ಥಾನ ಹಂಚಿಕೊಂಡಿದ್ದರು. ಆಸ್ಟ್ರೇಲಿಯಾ ಪಂದ್ಯದ ನಂತರ ಸಿರಾಜ್‌ ಐದು ಪಾಯಿಂಟ್‌ ಕಳೆದುಕೊಂಡಿದ್ದಾರೆ. ಸ್ಪಿನ್ನರ್‌ ಕುಲದೀಪ್ ಯಾದವ್ ಮೂರು ಸ್ಥಾನ ಮೇಲೇರಿ ಎಂಟನೇ ಸ್ಥಾನದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.