ಏಷ್ಯಾ ಕಪ್ | ಮಿರಾಜ್–ಶಾಂತೊ ಶತಕ; ಅಫ್ಗಾನ್ ಎದುರು ಬಾಂಗ್ಲಾಕ್ಕೆ 89 ರನ್‌ ಗೆಲುವು ಲಾಹೋರ್: ಮೆಹದಿ ಹಸನ್ ಮಿರಾಜ್ ಮತ್ತು ನಜ್ಮುಲ್ ಹುಸೇನ್ ಶಾಂತೊ ಅವರ ಶತಕಗಳ ಬಲದಿಂದ ಬಾಂಗ್ಲಾದೇಶ ತಂಡವು ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 89 ರನ್‌ಗಳಿಂದ ಅಫ್ಗಾನಿಸ್ತಾನ ತಂಡವನ್ನು ಮಣಿಸಿತು. ಗಡಾಫಿ ಮೈದಾನದಲ್ಲಿ ಭಾನುವಾರ ನಡೆದ ಬಿ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾದೇಶ, 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 334 ರನ್ ಗಳಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾ ತಂಡ 63 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡಿತು. ಆದರೆ ಮೆಹದಿ ಹಸನ್ 119 ಎಸೆತಗಳಲ್ಲಿ 112 ರನ್‌ ಗಳಿಸಿದರು. ಶಾಂತೊ 105 ಎಸೆತಗಳಲ್ಲಿ 104 ರನ್‌ ದಾಖಲಿಸಿದರು. ಇವರಿಬ್ಬರೂ ಮೂರನೇ ವಿಕೆಟ್ ಜೊತೆಯಾಟದಲ್ಲಿ 215 ರನ್‌ಗಳನ್ನು ಪೇರಿಸಿ ತಂಡವನ್ನು ಬೃಹತ್‌ ಮೊತ್ತದತ್ತ ಮುನ್ನಡೆಸಿದರು. ಸವಾಲಿನ ಗುರಿ ಬೆನ್ನಟ್ಟಿದ ಅಫ್ಗಾನಿಸ್ತಾನ 44.3 ಓವರ್‌ಗಳಲ್ಲಿ 245 ರನ್‌ಗಳಿಗೆ ಆಲೌಟಾಯಿತು. ಇಬ್ರಾಹಿಂ ಜದ್ರಾನ್‌ (75 ರನ್‌; 74 ಎ.) ಮತ್ತು ಹಷ್ಮತ್‌ಉಲ್ಲಾ ಶಾಹಿದಿ (51 ರನ್‌; 60 ಎ.) ಹೊರತುಪಡಿಸಿ ಇತರ ಬ್ಯಾಟರ್‌ಗಳು ವಿಫಲರಾದರು. ಬಾಂಗ್ಲಾ ತಂಡದ ತಸ್ಕಿನ್‌ ಅಹ್ಮದ್‌ (44ಕ್ಕೆ 4) ಮತ್ತು ಶೊರೀಫುಲ್‌ ಇಸ್ಲಾಂ (36ಕ್ಕೆ 3) ಪರಿಣಾಮಕಾರಿ ಬೌಲಿಂಗ್‌ ಪ್ರದರ್ಶನ ನೀಡಿದರು. ಸಂಕ್ಷಿಪ್ತ ಸ್ಕೋರು ಬಾಂಗ್ಲಾದೇಶ: 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 334 (ಮೆಹದಿ ಹಸನ್ ಮಿರಾಜ್ 112, ನಜ್ಮುಲ್ ಹುಸೇನ್ ಶಾಂತೊ 104, ಮುಷ್ಫೀಕುರ್ ರಹೀಂ 25, ಶಕೀಬ್ ಅಲ್ ಹಸನ್ ಔಟಾಗದೆ 32, ಮೊಹಮ್ಮದ್ ನೈಮ್ 28, ಮುಜೀಬ್ 62ಕ್ಕೆ1, ಗುಲ್ಬದೀನ್ 58ಕ್ಕೆ1) ಅಫ್ಗಾನಿಸ್ತಾನ: 44.3 ಓವರ್‌ಗಳಲ್ಲಿ 245 (ಇಬ್ರಾಹಿಂ ಜದ್ರಾನ್‌ 75, ಹಷ್ಮತ್‌ಉಲ್ಲಾ ಶಾಹಿದಿ 51, ರಶೀದ್‌ ಖಾನ್ 24, ತಸ್ಕಿನ್‌ ಅಹ್ಮದ್‌ 44ಕ್ಕೆ 4, ಶೊರೀಫುಲ್‌ ಇಸ್ಲಾಂ 36ಕ್ಕೆ 3) ಫಲಿತಾಂಶ: ಬಾಂಗ್ಲಾದೇಶಕ್ಕೆ 89 ರನ್‌ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.