ಡೆಂಗಿ ಜ್ವರದಿಂದ ಚೇತರಿಸಿಕೊಂಡಿರುವ ಶುಭಮನ್‌ ಗಿಲ್‌ ಅಭ್ಯಾಸ ಅಹಮದಾಬಾದ್‌: ಡೆಂಗಿ ಜ್ವರದಿಂದ ಚೇತರಿಸಿಕೊಂಡಿರುವ ಭಾರತ ತಂಡದ ಆರಂಭಿಕ ಬ್ಯಾಟರ್‌ ಶುಭಮನ್‌ ಗಿಲ್‌ ಅವರು ಗುರುವಾರ ಇಲ್ಲಿ ಅಭ್ಯಾಸ ಕೈಗೊಂಡರು. ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ಆಡದೇ ಇರುವ ಗಿಲ್‌, ಪಾಕಿಸ್ತಾನದ ವಿರುದ್ಧ ಶನಿವಾರ ಕಣಕ್ಕಿಳಿಯುವ ವಿಶ್ವಾಸದಲ್ಲಿದ್ದಾರೆ. ಬೆಳಿಗ್ಗೆ 11ರ ವೇಳೆಗೆ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಬಂದ ಅವರು ಕೆಲಹೊತ್ತು ದೈಹಿಕ ಕಸರತ್ತು ನಡೆಸಿದರು. ಆ ಬಳಿಕ ನೆಟ್ಸ್‌ನಲ್ಲಿ ಬ್ಯಾಟಿಂಗ್‌ ತಾಲೀಮು ಕೈಗೊಂಡರು. ಥ್ರೋಡೌನ್‌ ಪರಿಣತ ನುವಾನ್‌ ಸೆನೆವಿರತ್ನೆ ಮತ್ತು ಸ್ಥಳೀಯ ನೆಟ್‌ ಬೌಲರ್‌ಗಳನ್ನು ಅವರು ಎದುರಿಸಿದರು. ರೋಹಿತ್‌ ಶರ್ಮಾ ಬಳಗದ ಪೂರ್ಣ ಪ್ರಮಾಣದ ಅಭ್ಯಾಸ ಶುಕ್ರವಾರ ನಡೆಯಲಿದೆ. ಕೋಚ್‌ ರಾಹುಲ್‌ ದ್ರಾವಿಡ್‌ ಮತ್ತು ತಂಡದ ವೈದ್ಯರು ಅಭ್ಯಾಸದ ಅವಧಿಯಲ್ಲಿ ಗಿಲ್‌ ಅವರ ಪ್ರದರ್ಶನದ ಮೇಲೆ ನಿಗಾ ಇಡಲಿದ್ದಾರೆ. ಅವರನ್ನು ಶನಿವಾರ ಕಣಕ್ಕಿಳಿಸಬೇಕೇ ಎಂಬುದನ್ನು ಆ ಬಳಿಕ ನಿರ್ಧರಿಸಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.