: ಭಾರತ–ಪಾಕಿಸ್ತಾನ ಪಂದ್ಯ ನೋಡಲು ಆಸ್ಪತ್ರೆ ಮೊರೆ ಅಹಮದಾಬಾದ್ : ಶನಿವಾರ ಇಲ್ಲಿ ನಡೆಯಲಿರುವ ಬಹು ನಿರೀಕ್ಷೆಯ ಭಾರತ –ಪಾಕಿಸ್ತಾನ ವಿಶ್ವಕಪ್ ಪಂದ್ಯ ವೀಕ್ಷಿಸಲು ಬರುವ ಕ್ರಿಕೆಟ್‌ ಅಭಿಮಾನಿಗಳಿಗೆ ದುಬಾರಿ ಬಾಡಿಗೆ ತೆತ್ತು ಹೋಟೆಲ್‌ನಲ್ಲಿ ಉಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೊಠಡಿಗಳ ಬಾಡಿಗೆಯನ್ನು ಮಾಮೂಲಿ ದಿನಗಳಿಗಿಂತ ಹತ್ತು ಪಟ್ಟು ಏರಿಸಿದ್ದು ಅವು ಕೈಗೆಟಕುತ್ತಿಲ್ಲ. ಹೀಗಾಗಿ ಕೆಲವು ಅಭಿಮಾನಿಗಳು ಹೊಸ ದಾರಿ ಕಂಡುಕೊಂಡಿದ್ದಾರೆ. ಇಲ್ಲಿನ ಪ್ರಮುಖ ಹೋಟೆಲ್‌ ಸಾಮಾನ್ಯವಾಗಿ ದಿನಕ್ಕೆ ₹6,000ಕ್ಕೆ ಕೊಠಡಿ ನೀಡುತ್ತಿತ್ತು. ಈಗ ಶುಕ್ರವಾರ (ಅ.13), ಶನಿವಾರ, ಭಾನುವಾರ ಈ ಮೊತ್ತವನ್ನು ₹70,000ಕ್ಕೆ ಏರಿಸಿದೆ. ಆದರೆ ಆರೋಗ್ಯ ತಪಾಸಣೆಗೆ ಆಸ್ಪತ್ರೆಗಳಲ್ಲಿ ದಾಖಲಾದರೆ ದಿನಕ್ಕೆ ₹7,000 ಮಾತ್ರ ವೆಚ್ಚವಾಗುತ್ತದೆ. ‘ಹೀಗಾಗಿ ಕೆಲವರು ಈ ನೆಪದ ಮೇಲೆ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ದೇಹದ ಪೂರ್ಣ ತಪಾಸಣೆ ಜೊತೆಗೆ ಒಂದು ರಾತ್ರಿ ಉಳಿದರೆ ಎರಡೂ ಉದ್ದೇಶ ಈಡೇರುತ್ತದೆ. ಹೀಗಾಗಿ ಈ ಮಾರ್ಗ ಕಂಡುಕೊಂಡಿದ್ದಾರೆ’ ಎಂದು ನಗರದ ವೈದ್ಯರೊಬ್ಬರು ಹೆಸರು ಬಹಿರಂಗಪಡಿಸಬಾರದೆಂಬ ಷರತ್ತಿನ ಮೇಲೆ ಸುದ್ದಿಸಂಸ್ಥೆಗೆ ತಿಳಿಸಿದರು. ‘ಇವರಲ್ಲಿ ಹೆಚ್ಚಿನವರು ಅಮೆರಿಕ, ಇಂಗ್ಲೆಂಡ್‌ನ ಅನಿವಾಸಿ ಭಾರತೀಯರಾಗಿದ್ದು, ಒಂದು ಬೆಡ್‌ನ ಡೀಲಕ್ಸ್‌ ರೂಮ್ ಕಾದಿರಿಸಿದ್ದು, ಪೂರ್ಣ ಹೆಲ್ತ್‌ ಪ್ಯಾಕೇಜ್ ಆಯ್ಕೆ ಮಾಡಿಕೊಂಡಿದ್ದಾರೆ’ ಎಂದರು. ‘ಈ ಮುಂಗಡ ಬುಕ್ಕಿಂಗ್ ಮೇಲೆ ಎಚ್ಚರಿಕೆ ವಹಿಸಬೇಕಿದೆ. ನಮ್ಮ ಮುಖ್ಯ ಗುರಿ ರೋಗಿಗಳ ಆರೈಕೆ. ಒಂದು ಪಂದ್ಯ ನೋಡಲು ಈ ರೀತಿ ಬೆಡ್‌ಗಳನ್ನು ಕೊಡಲು ಆಗುವುದಿಲ್ಲ. ಆದರೆ ಕಾಯಿಲೆ ಹಿನ್ನೆಲೆಯಿರುವ ವ್ಯಕ್ತಿಗಳಿಗೆ ನಿರಾಕರಿಸಲಾಗದು’ ಎಂದರು. ವಿಮಾನ ದರಗಳೂ ‘ಗಗನಮುಖಿ’ಯಾಗಿವೆ. ಮುಂಬೈ– ಅಹಮದಾಬಾದ್‌ ನಡುವೆ ಎರಡು ವಿಶೇಷ ರೈಲುಗಳ ಓಡಾಟಕ್ಕೆ ರೈಲ್ವೆಯು ವ್ಯವಸ್ಥೆ ಮಾಡಿದೆ. ಭಾರತ– ಪಾಕಿಸ್ತಾನ ತಂಡಗಳ ಮುಖಾಮುಖಿ ತೀರಾ ಕಡಿಮೆ ಆಗಿರುವ ಕಾರಣ ಟಿಕೆಟ್‌ಗಳಿಗೆ ಬೇಡಿಕೆಯೂ ಹೆಚ್ಚಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.