ಟಿ20 ವಿಶ್ವಕಪ್ ಟೂರ್ನಿಯಿಂದಲೂ ರವೀಂದ್ರ ಜಡೇಜ ಔಟ್ ನವದೆಹಲಿ: ಆಲ್‌ರೌಂಡರ್‌ ರವೀಂದ್ರ ಜಡೇಜ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಿಂದಲೂ ಹೊರಬಿದ್ದಿದ್ದಾರೆ. ಅವರ ಮೊಣಕಾಲಿನ ಗಾಯವು ಗಂಭೀರವಾಗಿದ್ದು ಶಸ್ತ್ರಚಿಕಿತ್ಸೆ ಪಡೆಯಲಿದ್ದಾರೆ. ಇದರಿಂದಾಗಿ ಅವರು ಅನಿರ್ದಿಷ್ಟಾವಧಿಯವರೆಗೆ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗಿದೆ. 33 ವರ್ಷದ ಅನುಭವಿ ಜಡೇಜ ಅಲಭ್ಯರಾಗಿರುವುದು ರೋಹಿತ್ ಶರ್ಮಾ ಬಳಗಕ್ಕೆ ದೊಡ್ಡ ಹಿನ್ನಡೆಯಾಗಿದೆ. ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಭಾರತದ ಜಯಕ್ಕೆ ಜಡೇಜ ಉಪಯುಕ್ತ ಕಾಣಿಕೆ ನೀಡಿದ್ದರು. ಹಾಂಗ್‌ಕಾಂಗ್ ವಿರುದ್ಧದ ಪಂದ್ಯದಲ್ಲಿ ಆಡಿದ್ದರು. ಆದರೆ, ಅವರು ಮೊಣಕಾಲು ನೋವಿನಿಂದಾಗಿ ಏಷ್ಯಾ ಕಪ್ ಟೂರ್ನಿಯ ಉಳಿದ ಪಂದ್ಯಗಳಲ್ಲಿ ಆಡುವುದಿಲ್ಲವೆಂದು ಶುಕ್ರವಾರ ಬಿಸಿಸಿಐತಿಳಿಸಿತ್ತು. ‘ಜಡೇಜ ಬಲಮೊಣಕಾಲಿನ ಗಾಯವು ತೀವ್ರತರವಾಗಿದೆ. ಅದಕ್ಕಾಗಿ ಅವರು ಉನ್ನತವಾದ ಶಸ್ತ್ರಚಿಕಿತ್ಸೆ ಪಡೆಯುವುದು ಅನಿವಾರ್ಯವಾಗಿದೆ. ಇದರಿಂದಾಗಿ ಅವರಿಗೆ ಅನಿರ್ದಿಷ್ಟಾವಧಿಯವರೆಗೆ ವಿಶ್ರಾಂತಿ ಹಾಗೂ ಆರೈಕೆ ಅಗತ್ಯವಿದೆ. ಇಂತಿಷ್ಟೇ ಅವಧಿಯಲ್ಲಿ ಅವರು ಚೇತರಿಸಿಕೊಳ್ಳುವರು ಎಂದು ಹೇಳುವುದು ಕಷ್ಟ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.