2023: ಸುಲಭ ಜಯದ ನಿರೀಕ್ಷೆಯಲ್ಲಿ ರೋಹಿತ್ ಪಡೆ ಪಲೇಕೆಲೆ, ಶ್ರೀಲಂಕಾ: ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಇಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ನೇಪಾಳ ತಂಡದ ಎದುರು ಕಣಕ್ಕಿಳಿಯಲಿದೆ. ಶನಿವಾರ ನಡೆದ ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಮಳೆಯಿಂದಾಗಿ ಫಲಿತಾಂಶ ಹೊರಹೊಮ್ಮಲಿಲ್ಲ. ಅದರಿಂದಾಗಿ ಉಭಯ ತಂಡಗಳೂ ತಲಾ ಒಂದು ಅಂಕ ಹಂಚಿಕೊಂಡವು. ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕ್ ತಂಡವು ನೇಪಾಳವನ್ನು ಸೋಲಿಸಿತ್ತು. ಅದರಿಂದಾಗಿ ಒಟ್ಟು ಮೂರು ಅಂಕಗಳೊಂದಿಗೆ ಸೂಪರ್ ಫೋರ್ ಹಂತ ಪ್ರವೇಶಿಸಿತು. ಭಾರತವು ಈ ಪಂದ್ಯದಲ್ಲಿ ಜಯಿಸಿ ಸೂಪರ್ ಫೋರ್‌ ನಲ್ಲಿ ಪಾಕ್‌ ತಂಡವನ್ನು ಎದುರಿಸುವತ್ತ ಚಿತ್ತ ನೆಟ್ಟಿದೆ. ನೇಪಾಳ ತಂಡವು ಕ್ರಿಕೆಟ್‌ ಅಂಗಳದಲ್ಲಿ ಈಗ ಅಂಬೆಗಾಲಿಡುತ್ತಿರುವ ತಂಡವಾಗಿರುವುದರಿಂದ ಭಾರತವೇ ಗೆಲುವಿನ ನೆಚ್ಚಿನ ತಂಡವಾಗಿದೆ. ಆದರೆ, ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು ಮೊದಲು ಬ್ಯಾಟಿಂಗ್ ಮಾಡಿ 266 ರನ್ ಗಳಿಸಿತ್ತು. ಅಗ್ರಕ್ರಮಾಂಕದ ಬ್ಯಾಟರ್‌ಗಳಾದ ನಾಯಕ ರೋಹಿತ್ ಶರ್ಮಾ, ವಿರಾಟ್‌ ಕೊಹ್ಲಿ, ಶುಭಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಅವರು ಬೇಗನೇ ಔಟಾದರು. ಇದರಿಂದಾಗಿ ತಂಡವು 66ಕ್ಕೆ 4 ವಿಕೆಟ್‌ ಕಳೆದುಕೊಂಡಿತು. ಈ ಹಂತದಲ್ಲಿ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಅವರು ಶತಕದ ಜೊತೆಯಾಟವಾಡಿದರು. ಅದರಿಂದಾಗಿ ತಂಡವು ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ಸಾಧ್ಯವಾಯಿತು. ಪಾಕಿಸ್ತಾನ ತಂಡದ ಶಾಹೀನ್ ಆಫ್ರಿದಿ, ನಸೀಂ ಶಾ ಮತ್ತು ಹ್ಯಾರಿಸ್ ರವೂಫ್ ಅವರ ಅಮೋಘ ಬೌಲಿಂಗ್‌ ಮುಂದೆ ಭಾರತದ ಬ್ಯಾಟರ್‌ಗಳು ಎಡವಿದರು. ಅದರಿಂದಾಗಿ ಈ ಟೂರ್ನಿಯಲ್ಲಿ ಪಾಕ್ ತಂಡವನ್ನು ಮತ್ತೆರಡು ಬಾರಿ ಎದುರಿಸುವ ಸಾಧ್ಯತೆ ಇರುವುದರಿಂದ ರೋಹಿತ್ ಬಳಗವು ತಮ್ಮ ಕೌಶಲಗಳನ್ನು ಸುಧಾರಿಸಿಕೊಳ್ಳಲು ನೇಪಾಳ ವಿರುದ್ಧದ ಪಂದ್ಯವನ್ನು ವೇದಿಕೆ ಮಾಡಿಕೊಳ್ಳುವ ಅವಕಾಶ ಇದೆ. ಮುಂದಿನ ತಿಂಗಳು ನಡೆಯುವ ಏಕದಿನ ವಿಶ್ವಕಪ್ ಟೂರ್ನಿಗೆ ತಂಡವನ್ನು ಆಯ್ಕೆ ಮಾಡಲು ಕೂಡ ಏಷ್ಯಾ ಕಪ್ ಟೂರ್ನಿಯು ಪ್ರಮುಖ ವೇದಿಕೆಯಾಗಿದೆ. ಅದರಿಂದಾಗಿ ನಾಯಕ ರೋಹಿತ್ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬಹಳ ಎಚ್ಚರಿಕೆಯಿಂದ ತಂತ್ರಗಾರಿಕೆಯನ್ನು ರೂಪಿಸಬೇಕಾದ ಅಗತ್ಯವೂ ಇದೆ. ಮುಖ್ಯವಾಗಿ ಆರಂಭಿಕ ಬ್ಯಾಟರ್ ಕೂಡ ಆಗಿರುವ ರೋಹಿತ್ ಲಯಕ್ಕೆ ಮರಳಿದರೆ ತಂಡದ ಒತ್ತಡ ಅರ್ಧ ಕಡಿಮೆಯಾಗುತ್ತದೆ. ರೋಹಿತ್ ಪಾಡೆಲ್ ನಾಯಕತ್ವದ ನೇಪಾಳ ತಂಡದ ಬೌಲರ್‌ಗಳು ಪಾಕ್ ಎದುರಿನ ಪಂದ್ಯದಲ್ಲಿ ತಕ್ಕಮಟ್ಟಿಗೆ ಬೌಲಿಂಗ್ ಮಾಡಿದ್ದರು. ಆದರೆ ಬ್ಯಾಟಿಂಗ್‌ನಲ್ಲಿ ಹೆಚ್ಚು ಮಿಂಚಿರಲಿಲ್ಲ. ಆದರೆ ಆ ಪಂದ್ಯದ ಅನುಭವವನ್ನು ಭಾರತದ ಎದುರು ಬಳಸಿಕೊಂಡು ಗಮನ ಸೆಳಯುವ ಪ್ರಯತ್ನವಂತೂ ನೇಪಾಳ ಮಾಡಬಹುದು. ಪಂದ್ಯ ಆರಂಭ: ಮಧ್ಯಾಹ್ನ 3 ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ಸ್ಟಾರ್ ಆ್ಯಪ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.