ಕ್ರಿಕೆಟ್‌: ನ್ಯೂಜಿಲೆಂಡ್‌ ವಿರುದ್ಧ ಸರಣಿ ಗೆದ್ದ ಆಸ್ಟ್ರೇಲಿಯಾ ಕೇನ್ಸ್‌, ಆಸ್ಟ್ರೇಲಿಯಾ: ಆ್ಯಡಮ್‌ ಜಂಪಾ (35ಕ್ಕೆ 5) ಅವರ ಚುರುಕಿನ ಬೌಲಿಂಗ್‌ ನೆರವಿನಿಂದ ಆಸ್ಟ್ರೇಲಿಯಾ ತಂಡ ಎರಡನೇ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡವನ್ನು 113 ರನ್‌ಗಳಿಂದ ಮಣಿಸಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿಯಿರುವಂತೆಯೇ 2–0 ರಲ್ಲಿ ತನ್ನದಾಗಿಸಿಕೊಂಡಿತು. ಗುರುವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 195 ರನ್‌ ಗಳಿಸಿದರೆ, ನ್ಯೂಜಿಲೆಂಡ್‌ 33 ಓವರ್‌ಗಳಲ್ಲಿ ಕೇವಲ 82 ರನ್‌ಗಳಿಗೆ ಆಲೌಟಾಯಿತು. ಲೆಗ್‌ಸ್ಪಿನ್ನರ್‌ ಜಂಪಾ ಅವರ ಕೈಚಳಕದ ಮುಂದೆ ಕಿವೀಸ್‌ ತಂಡ ನಲುಗಿತು. 17 ರನ್‌ ಗಳಿಸಿದ ನಾಯಕ ಕೇನ್‌ ವಿಲಿಯಮ್ಸನ್‌ ‘ಟಾಪ್‌ ಸ್ಕೋರರ್‌’ ಎನಿಸಿಕೊಂಡರು. ಆತಿಥೇಯ ತಂಡದ ಪರ ಸ್ಟೀವನ್‌ ಸ್ಮಿತ್‌ 61 ರನ್‌ (94 ಎಸೆತ) ಗಳಿಸಿದರೆ, ಮಿಚೆಲ್‌ ಸ್ಟಾರ್ಕ್‌ 38 ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ 25 ರನ್‌ ಕಲೆಹಾಕಿದರು. ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 9ಕ್ಕೆ 195 (ಸ್ಟೀವನ್‌ ಸ್ಮಿತ್‌ 61, ಗ್ಲೆನ್‌ ಮ್ಯಾಕ್ಸ್‌ವೆಲ್‌ 25, ಮಿಚೆಲ್‌ ಸ್ಟಾರ್ಕ್‌ ಔಟಾಗದೆ 38, ಟ್ರೆಂಟ್‌ ಬೌಲ್ಟ್‌ 38ಕ್ಕೆ 4, ಮ್ಯಾಟ್‌ ಹೆನ್ರಿ 33ಕ್ಕೆ 3) ನ್ಯೂಜಿಲೆಂಡ್‌ 33 ಓವರ್‌ಗಳಲ್ಲಿ 82 (ಕೇನ್‌ ವಿಲಿಯಮ್ಸನ್ 16, ಮಿಚೆಲ್‌ ಸ್ಯಾಂಟ್ನೆರ್‌ ಔಟಾಗದೆ 16, ಆ್ಯಡಮ್‌ ಜಂಪಾ 35ಕ್ಕೆ 5, ಸೀನ್‌ ಅಬಾಟ್‌ 1ಕ್ಕೆ 2, ಮಿಚೆಲ್‌ ಸ್ಟಾರ್ಕ್‌ 12ಕ್ಕೆ 2) ಫಲಿತಾಂಶ: ಆಸ್ಟ್ರೇಲಿಯಾಕ್ಕೆ 113 ರನ್‌ ಜಯ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.