ದಕ್ಷಿಣ ವಲಯ ಬೃಹತ್‌ ಮೊತ್ತ ಸೇಲಂ, ತಮಿಳುನಾಡು (ಪಿಟಿಐ): ರಿಕಿ ಭುಯಿ (ಅಜೇಯ 103) ಅವರ ಶತಕದ ನೆರವಿನಿಂದ ದಕ್ಷಿಣ ವಲಯ ತಂಡ, ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಉತ್ತರ ವಲಯ ವಿರುದ್ಧ ಬೃಹತ್‌ ಮೊತ್ತ ಪೇರಿಸಿದೆ. ಸೇಲಂನಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶುಕ್ರವಾರ ದಕ್ಷಿಣ ವಲಯ 8 ವಿಕೆಟ್‌ಗೆ 630 ರನ್‌ ಗಳಿಸಿ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ರೋಹನ್‌ ಕುನ್ನುಮಲ್‌ ಮತ್ತು ಹನುಮ ವಿಹಾರಿ ಅವರು ಮೊದಲ ದಿನದಾಟದಲ್ಲಿ ಶತಕ ಗಳಿಸಿದ್ದರೆ, ರಿಕಿ ಅವರು ಶುಕ್ರವಾರ ಎದುರಾಳಿ ಬೌಲರ್‌ಗಳನ್ನು ಕಾಡಿದರು. 107 ರನ್‌ಗಳಿಸಿ ಔಟಾಗದೆ ಉಳಿದಿದ್ದ ವಿಹಾರಿ 134 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ದಿನದಾಟದ ಅಂತ್ಯಕ್ಕೆ ಉತ್ತರ ವಲಯ ವಿಕೆಟ್‌ ನಷ್ಟವಿಲ್ಲದೆ 19 ರನ್‌ ಗಳಿಸಿತ್ತು. ಪಶ್ಚಿಮ ವಲಯಕ್ಕೆ ಇನಿಂಗ್ಸ್‌ ಮುನ್ನಡೆ: ಕೊಯಮತ್ತೂರಿನಲ್ಲಿ ನಡೆಯುತ್ತಿರುವ ಇನ್ನೊಂದು ಸೆಮಿಫೈನಲ್‌ನಲ್ಲಿ ಪಶ್ಚಿಮ ವಲಯ ತಂಡ, ಕೇಂದ್ರ ವಲಯ ವಿರುದ್ಧ ಇನಿಂಗ್ಸ್‌ ಮುನ್ನಡೆ ಪಡೆದಿದೆ. ಮೊದಲ ದಿನ 9ಕ್ಕೆ 252 ರನ್‌ ಗಳಿಸಿದ್ದ ಪಶ್ಚಿಮ ವಲಯ 257 ರನ್‌ಗಳಿಗೆ ಆಲೌಟಾಯಿತು. ಆ ಬಳಿಕ ತಿರುಗೇಟು ನೀಡಿ ಕೇಂದ್ರ ವಲಯವನ್ನು ಕೇವಲ 128 ರನ್‌ಗಳಿಗೆ ನಿಯಂತ್ರಿಸಿತು. ಜಯದೇವ್‌ ಉನದ್ಕತ್‌ (24ಕ್ಕೆ 3) ಮತ್ತು ತನುಷ್‌ ಕೋಟ್ಯಾನ್‌ (17ಕ್ಕೆ 3) ಎದುರಾಳಿ ಬ್ಯಾಟರ್‌ಗಳನ್ನು ಕಾಡಿದರು. ಶುಕ್ರವಾರದ ಆಟದ ಅಂತ್ಯಕ್ಕೆ ಪಶ್ಚಿಮ ವಲಯ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 130 ರನ್‌ ಗಳಿಸಿದ್ದು, ಒಟ್ಟು 259 ರನ್‌ಗಳ ಮುನ್ನಡೆಯಲ್ಲಿದೆ. ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ದಕ್ಷಿಣ ವಲಯ 172.5 ಓವರ್‌ಗಳಲ್ಲಿ 8 ವಿಕೆಟ್‌ಗೆ 630 ಡಿಕ್ಲೇರ್ಡ್‌ (ಹನುಮ ವಿಹಾರಿ 134, ರಿಕಿ ಭುಯಿ ಔಟಾಗದೆ 103, ಕೆ.ಗೌತಮ್‌ 48, ರವಿ ತೇಜ 42, ಮಯಂಕ್‌ ದಾಗರ್‌ 184ಕ್ಕೆ 3, ಪುಲಕಿತ್‌ ನಾರಂಗ್ 121ಕ್ಕೆ 2) ಉತ್ತರ ವಲಯ 5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 19 ಕೊಯಮತ್ತೂರಿನ ಪಂದ್ಯ: ಮೊದಲ ಇನಿಂಗ್ಸ್‌: ಪಶ್ಚಿಮ ವಲಯ: 257. ಕೇಂದ್ರ ವಲಯ: 40.1 ಓವರ್‌ಗಳಲ್ಲಿ 128 (ಕರಣ್‌ ಶರ್ಮ 34, ಜಯದೇವ್‌ ಉನದ್ಕತ್‌ 24ಕ್ಕೆ 3, ತನುಷ್‌ ಕೋಟ್ಯಾನ್‌ 17ಕ್ಕೆ 3) ಎರಡನೇ ಇನಿಂಗ್ಸ್‌: ಪಶ್ಚಿಮ ವಲಯ 29 ಓವರ್‌ಗಳಲ್ಲಿ 3 ವಿಕೆಟ್‌ಗೆ 130 (ಪೃಥ್ವಿ ಶಾ ಬ್ಯಾಟಿಂಗ್‌ 104) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.