ಮುಂಬೈ ಇಂಡಿಯನ್ಸ್‌ ಕೇಪ್‌ಟೌನ್‌ ತಂಡಕ್ಕೆ ಸೈಮನ್ ಕ್ಯಾಟಿಚ್‌ ಕೋಚ್ ಮುಂಬೈ: ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಸೈಮನ್‌ ಕ್ಯಾಟಿಚ್‌ ಅವರು ಚೊಚ್ಚಲ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಆಡಲಿರುವ ಮುಂಬೈ ಇಂಡಿಯನ್ಸ್‌ ಕೇಪ್‌ಟೌನ್‌ (ಎಂಐ ಕೇಪ್‌ಟೌನ್‌) ತಂಡದ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ದಿಗ್ಗಜ ಬ್ಯಾಟರ್‌ ಹಾಶಿಮ್‌ ಆಮ್ಲಾ ಅವರು ಬ್ಯಾಟಿಂಗ್‌ ಕೋಚ್‌ ಆಗಿ, ನ್ಯೂಜಿಲೆಂಡ್‌ನ ಮಾಜಿ ಆಟಗಾರ ಜೇಮ್ಸ್‌ ಪಮೆಟ್‌ ಅವರು ಫೀಲ್ಡಿಂಗ್‌ ಕೋಚ್‌ ಆಗಿ, ದಕ್ಷಿಣ ಆಫ್ರಿಕಾ ತಂಡದ ಇನ್ನೊಬ್ಬ ಮಾಜಿ ಆಟಗಾರ ರಾಬಿನ್‌ ಪೀಟರ್‌ಸನ್‌, ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ‘ಮುಂಬೈ ಇಂಡಿಯನ್ಸ್‌ ಕೇಪ್‌ಟೌನ್‌ ತಂಡದ ಮುಖ್ಯ ಕೋಚ್‌ ಹುದ್ದೆಯನ್ನು ನೀಡಿರುವುದು ಗೌರವವೇ ಸರಿ. ಒಂದು ಹೊಸ ತಂಡವನ್ನು ಕಟ್ಟಿ, ಆಟಗಾರರ ಕೌಶಲ ಹೆಚ್ಚಿಸುವುದು ಯಾವಾಗಲೂ ವಿಶೇಷ ಅನುಭವ ನೀಡುತ್ತದೆ’ ಎಂದು ಕ್ಯಾಟಿಚ್‌ ಪ್ರತಿಕ್ರಿಯಿಸಿದ್ದಾರೆ. ಎಂಐ ಕೇಪ್‌ಟೌನ್‌ ತಂಡ ಈಗಾಗಲೇ ಐವರು ಆಟಗಾರರ ಜತೆ ಒಪ್ಪಂದ ಮಾಡಿಕೊಂಡಿದೆ. ಕಗಿಸೊ ರಬಾಡ, ಡೆವಾಲ್ಡ್ ಬ್ರೆವಿಸ್‌, ರಶೀದ್‌ ಖಾನ್, ಸ್ಯಾಮ್‌ ಕರನ್‌ ಮತ್ತು ಲಿಯಾಮ್‌ ಲಿವಿಂಗ್‌ಸ್ಟೋನ್‌ ಅವರು ತಂಡ ಸೇರಿದ್ದಾರೆ. ಮೊದಲ ಆವೃತ್ತಿಯ ಟೂರ್ನಿ ಮುಂದಿನ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.