ಟಿ20: ಸರಣಿ ಜಯಿಸಿದ ಇಂಗ್ಲೆಂಡ್‌ ಬ್ರಿಸ್ಟಲ್‌ (ಪಿಟಿಐ): ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಭಾರತ ಮಹಿಳಾ ತಂಡಕ್ಕೆ ಇಂಗ್ಲೆಂಡ್‌ ಎದುರಿನ ಮೂರನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಸೋಲು ಎದುರಾಯಿತು. ಬ್ರಿಸ್ಟಲ್‌ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ 7 ವಿಕೆಟ್‌ಗಳ ಜಯ ಸಾಧಿಸಿದ ಇಂಗ್ಲೆಂಡ್‌, ಸರಣಿಯನ್ನು 2–1 ರಲ್ಲಿ ಗೆದ್ದಿತು. ಮೊದಲು ಬ್ಯಾಟ್‌ ಮಾಡಿದ ಹರ್ಮನ್‌ಪ್ರೀತ್‌ ಕೌರ್‌ ಬಳಗ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 122 ರನ್‌ ಗಳಿಸಿದರೆ, ಆತಿಥೇಯ ತಂಡ 18.2 ಓವರ್‌ಗಳಲ್ಲಿ 3 ವಿಕೆಟ್‌ಗೆ 126 ರನ್‌ ಗಳಿಸಿ ಜಯ ಸಾಧಿಸಿತು. ಸೋಫಿಯಾ ಡಂಕ್ಲಿ (49 ರನ್‌, 44ಎ) ಮತ್ತು ಅಲೈಸ್‌ ಕ್ಯಾಪ್ಸಿ (ಔಟಾಗದೆ 38, 24 ಎ) ಅವರು ಉತ್ತಮ ಆಟದ ಮೂಲಕ ಇಂಗ್ಲೆಂಡ್‌ ಗೆಲುವಿಗೆ ಕಾರಣರಾದರು. ಸಾಧಾರಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ಗೆ ಡಂಕ್ಲಿ ಮತ್ತು ಡ್ಯಾನಿ ವೈಟ್‌ (22) ಮೊದಲ ವಿಕೆಟ್‌ಗೆ 70 ರನ್‌ ಸೇರಿಸಿ ಉತ್ತಮ ಆರಂಭ ನೀಡಿದರು. ಆ ಬಳಿಕ ಕ್ಯಾಪ್ಸಿ ಬಿರುಸಿನ ಆಟವಾಡಿದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ಭಾರತದ ಬ್ಯಾಟರ್‌ಗಳು ಈ ಪಂದ್ಯದಲ್ಲಿ ಎಡವಿದರು. ಸೋಫಿ ಎಕ್ಲೆಸ್ಟೋನ್‌ (25ಕ್ಕೆ 3) ಮತ್ತು ಸಾರಾ ಗ್ಲೆನ್‌ (11ಕ್ಕೆ 2) ಅವರ ಸ್ಪಿನ್‌ ದಾಳಿಯನ್ನು ಎದುರಿಸಲು ವಿಫಲರಾದರು. 35 ರನ್‌ ಆಗುವಷ್ಟರಲ್ಲಿ ಐದು ವಿಕೆಟ್‌ಗಳು ಉರುಳಿದ್ದವು. ಶಫಾಲಿ ವರ್ಮಾ (5), ಸ್ಮೃತಿ ಮಂದಾನಾ (9) ಮತ್ತು ಕೌರ್‌ (5) ಎರಡಂಕಿ ತಲುಪಲು ವಿಫಲರಾದರೆ, ಎಸ್‌.ಮೇಘನಾ ಹಾಗೂ ಡಿ.ಹೇಮಲತಾ ಸೊನ್ನೆ ಸುತ್ತಿದರು. ದೀಪ್ತಿ ಶರ್ಮ (24 ರನ್‌, 25 ಎ) ಹಾಗೂ ಕೊನೆಯಲ್ಲಿ ರಿಚಾ ಘೋಷ್‌ (33 ರನ್‌, 22 ಎ) ಅವರು ಅಲ್ಪ ಪ್ರತಿರೋಧ ಒಡ್ಡಿದ್ದರಿಂದ ತಂಡದ ಮೊತ್ತ 100ರ ಗಡಿ ದಾಟಿತು. ಸಂಕ್ಷಿಪ್ತ ಸ್ಕೋರ್‌: ಭಾರತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 122 (ದೀಪ್ತಿ ಶರ್ಮ 24, ರಿಚಾ ಘೋಷ್‌ 33, ಪೂಜಾ ವಸ್ತ್ರಕರ್‌ ಔಟಾಗದೆ 19, ಸೋಫಿ ಎಕ್ಲೆಸ್ಟೋನ್‌ 25ಕ್ಕೆ 3, ಸಾರಾ ಗ್ಲೆನ್‌ 11ಕ್ಕೆ 2) ಇಂಗ್ಲೆಂಡ್‌ 18.2 ಓವರ್‌ಗಳಲ್ಲಿ 3 ವಿಕೆಟ್‌ಗೆ 126 (ಸೋಫಿಯಾ ಡಂಕ್ಲಿ 49, ಡ್ಯಾನಿ ವೈಟ್‌ 22, ಅಲೈಸ್‌ ಕ್ಯಾಪ್ಸಿ ಔಟಾಗದೆ 38, ರಾಧಾ ಯಾದವ್‌ 14ಕ್ಕೆ 1) ಫಲಿತಾಂಶ: ಇಂಗ್ಲೆಂಡ್‌ಗೆ 7 ವಿಕೆಟ್‌ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.