ಲಂಕಾದಲ್ಲಿ ಆಡಿದ ನೆರವು: ಭಾರತ ವಿರುದ್ಧ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಬಾಬರ್ ಕೊಲಂಬೊ: ಏಷ್ಯಾ ಕಪ್ 2023 ಕ್ರಿಕೆಟ್ ಟೂರ್ನಿಯಲ್ಲಿ ಸೂಪರ್ 4 ಹಂತದಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ಪಾಕಿಸ್ತಾನದ ನಾಯಕ ಬಾಬರ್ ಆಜಂ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಶ್ರೀಲಂಕಾದಲ್ಲಿ ಹೆಚ್ಚು ಆಡಿರುವ ಅನುಭವ ಹೊಂದಿರುವುದು ತಂಡಕ್ಕೆ ನೆರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಮತ್ತೊಂದು ಹಣಾಹಣಿಗೆ ವೇದಿಕೆ ಸಜ್ಜಾಗಿದೆ. ಭಾನುವಾರ ಇತ್ತಂಡಗಳು ಮುಖಾಮುಖಿಯಾಗಲಿವೆ. ಪಲೇಕೆಲೆಯಲ್ಲಿ ಆಡಿದ ಮೊದಲ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ಆದರೆ ಸೂಪರ್ 4 ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಮೀಸಲು ದಿನ (ಸೋಮವಾರ) ನಿಗದಿಪಡಿಸಲಾಗಿದೆ. ಕಳೆದ ಎರಡು ತಿಂಗಳಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ನಾವು ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದೇವೆ. ಶ್ರೀಲಂಕಾದಲ್ಲಿ ಟೆಸ್ಟ್, ಅಫ್ಗಾನಿಸ್ತಾನ ವಿರುದ್ಧ ಸರಣಿ ಮತ್ತು ಶ್ರೀಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ್ದೇವೆ. ಇದು ಪರಿಸ್ಥಿತಿಗೆ ಹೊಂದಿಕೊಂಡು ಉತ್ತಮ ಪ್ರದರ್ಶನ ನೀಡಲು ನೆರವಾಗಲಿದೆ ಎಂದು ಬಾಬರ್ ಹೇಳಿದ್ದಾರೆ. ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ಏಷ್ಯಾ ಕಪ್ ಪಂದ್ಯಗಳನ್ನು ಪಾಕ್ ಆಡುತ್ತಿದೆ. ಸತತ ಪ್ರವಾಸದಿಂದಾಗಿ ದಣಿವು ಮೂಡಲಿದೆಯೇ ಎಂಬುದಕ್ಕೆ ಉತ್ತರಿಸಿದ ಬಾಬರ್, ನಾವು ಈ ಕುರಿತು ಚಿಂತಿತರಾಗಿಲ್ಲ. ನಮ್ಮ ವೇಳಾಪಟ್ಟಿ ಹಾಗೂ ಪ್ರಯಾಣದ ಬಗ್ಗೆ ಅರಿವಿದೆ. ನಾವು ಎಲ್ಲವನ್ನೂ ಯೋಜಿಸಿದ್ದೇವೆ ಎಂದು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.