ಟಿ20 ಬೌಲರ್‌ಗಳ ರ‍್ಯಾಂಕಿಂಗ್: ದೀಪ್ತಿಗೆ ಬಡ್ತಿ ದುಬೈ: ಭಾರತದ ದೀಪ್ತಿ ಶರ್ಮಾ ಐಸಿಸಿ ಟ್ವೆಂಟಿ–20 ಕ್ರಿಕೆಟ್‌ ಬೌಲರ್‌ಗಳ ವಿಭಾಗದ ರ‍್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ ಮೂರನೇ ಸ್ಥಾನಕ್ಕೆ ಮರಳಿದ್ದಾರೆ. ಮಂಗಳವಾರ ಪ್ರಕಟವಾಗಿರುವ ರ‍್ಯಾಂಕಿಂಗ್‌ನಲ್ಲಿ ದೀಪ್ತಿ ಅವರು ಮೂರು ಸ್ಥಾನಗಳ ಬಡ್ತಿ ಪಡೆದಿದ್ದಾರೆ. ಆಲ್‌ರೌಂಡರ್‌ಗಳ ವಿಭಾಗದಲ್ಲೂ ಅವರಿಗೆ ಮೂರನೇ ಸ್ಥಾನ ಲಭಿಸಿದೆ. ಬಾಂಗ್ಲಾದೇಶದ ಸಿಲ್ಹೆಟ್‌ನಲ್ಲಿಸದ್ಯ ನಡೆಯುತ್ತಿರುವ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಉತ್ತಮ ಆಟವಾಡುತ್ತಿರುವುದರಿಂದ ಅವರ ರ‍್ಯಾಂಕಿಂಗ್‌ ಪ್ರಗತಿಗೆ ಕಾರಣವಾಗಿದೆ. ದೀಪ್ತಿ ಅವರು 2019ರಲ್ಲೂ ಮೂರನೇ ಸ್ಥಾನ ತಲುಪಿದ್ದರು. ಬೌಲರ್‌ಗಳ ವಿಭಾಗದಲ್ಲಿ ರೇಣುಕಾ ಸಿಂಗ್‌ (8ನೇ ಸ್ಥಾನ), ಸ್ನೇಹಾ ರಾಣಾ (15), ಪೂಜಾ ವಸ್ತ್ರಕರ್‌ (28) ಏರಿಕೆ ಕಂಡಿದ್ದಾರೆ. ಇಂಗ್ಲೆಂಡ್‌ ಸ್ಪಿನ್ನರ್‌ಗಳಾದ ಸೋಫಿ ಎಕ್ಲೆಸ್ಟೋನ್ ಮತ್ತು ಸಾರಾ ಗ್ಲೆನ್ ಮೊದಲೆರಡು ಸ್ಥಾನಗಳಲ್ಲಿದ್ದಾರೆ. ಬ್ಯಾಟರ್‌ಗಳ ವಿಭಾಗದಲ್ಲಿ ದೀಪ್ತಿ 35ನೇ ಸ್ಥಾನದಲ್ಲಿದ್ದಾರೆ. ಭಾರತದ ಜೆಮಿಮಾ ರಾಡ್ರಿಗಸ್‌ ಆರನೇ ಮತ್ತು ಉಪನಾಯಕಿ ಸ್ಮೃತಿ ಮಂದಾನ ಎರಡನೇ ಸ್ಥಾನದಲ್ಲಿದ್ದಾರೆ. ಶಫಾಲಿ ವರ್ಮಾ ಎಂಟನೇ ಸ್ಥಾನಕ್ಕೆ ಜಾರಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.