ಅಲೆನ್ ಮಿಂಚು: ನ್ಯೂಜಿಲೆಂಡ್‌ ಜಯಭೇರಿ ಕ್ರೈಸ್ಟ್‌ಚರ್ಚ್‌, ನ್ಯೂಜಿಲೆಂಡ್‌: ಫಿನ್ ಅಲೆನ್ (62 ರನ್‌, 42ಎ, 4X1, 6X6) ಅವರ ಶಿಸ್ತುಬದ್ಧ ಬ್ಯಾಟಿಂಗ್‌ ಬಲದಿಂದ ನ್ಯೂಜಿಲೆಂಡ್‌ ತಂಡವು ಇಲ್ಲಿ ನಡೆಯುತ್ತಿರುವ ಟಿ20 ತ್ರಿಕೋನ ಸರಣಿ ಕ್ರಿಕೆಟ್‌ ಸರಣಿಯಲ್ಲಿ ಪಾಕಿಸ್ತಾನ ತಂಡವನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿತು. ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು ಕೇವಲ 130 ರನ್ ಗಳಿಸಿತು. ಟಿಮ್ ಸೌಥಿ (31ಕ್ಕೆ 2), ಮಿಚೆಲ್ ಸ್ಯಾಂಟನರ್ (27ಕ್ಕೆ 2) ಮತ್ತು ಮೈಕೆಲ್ ಬ್ರೇಸ್‌ವೆಲ್‌ (11ಕ್ಕೆ 2) ಆತಿಥೇಯ ತಂಡಕ್ಕಾಗಿ ಪರಿಣಾಮಕಾರಿ ಬೌಲಿಂಗ್ ಮಾಡಿದರು. ಇಫ್ತಿಕಾರ್‌ ಅಹಮದ್‌ (27), ಅಸಿಫ್ ಅಲಿ (ಔಟಾಗದೆ 25) ಮಾತ್ರ ಪಾಕ್‌ ಬ್ಯಾಟಿಂಗ್‌ನಲ್ಲಿ ಸ್ವಲ್ಪ ಪ್ರತಿರೋಧ ತೋರಿದರು. ಸಾಧಾರಣ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ ಪರ ಅಲೆನ್ ಮತ್ತು ಡೆವೊನ್ ಕಾನ್ವೆ (ಔಟಾಗದೆ 49, 46ಎ, 4X5) ಮೊದಲ ವಿಕೆಟ್‌ಗೆ 117 ರನ್ ಸೇರಿಸಿ ಜಯವನ್ನು ಸುಲಭಗೊಳಿಸಿದರು. 17ನೇ ಓವರ್‌ನಲ್ಲಿ ತಂಡವು ಒಂದು ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ತಲುಪಿತು. ಸರಣಿಯಲ್ಲಿ ನ್ಯೂಜಿಲೆಂಡ್‌ಗೆ ಇದು ಎರಡನೇ ಜಯವಾಗಿದೆ. ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ 20 ಓವರ್‌ಗಳಲ್ಲಿ 7ಕ್ಕೆ 130 (ಬಾಬರ್ ಅಜಂ 21, ಇಫ್ತಿಕಾರ್ ಅಹಮದ್‌ 27, ಅಸಿಫ್ ಅಲಿ ಔಟಾಗದೆ 25;ಟಿಮ್ ಸೌಥಿ 31ಕ್ಕೆ 2, ಮಿಚೆಲ್ ಸ್ಯಾಂಟನರ್ 27ಕ್ಕೆ 2, ಮೈಕೆಲ್ ಬ್ರೇಸ್‌ವೆಲ್‌ 11ಕ್ಕೆ 2) ನ್ಯೂಜಿಲೆಂಡ್‌ 16.1 ಓವರ್‌ಗಳಲ್ಲಿ 1ಕ್ಕೆ 131 (ಫಿನ್ ಅಲೆನ್‌ 62, ಡೆವೊನ್ ಕಾನ್ವೆ 49, ಕೇನ್ ವಿಲಿಯಮ್ಸನ್‌ 9;ಶಾದಾಬ್‌ ಖಾನ್‌ 26ಕ್ಕೆ 1). ಫಲಿತಾಂಶ: ನ್ಯೂಜಿಲೆಂಡ್ ತಂಡಕ್ಕೆ 9 ವಿಕೆಟ್‌ಗಳ ಜಯ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.