ದೇವದತ್ತ ಪಡಿಕ್ಕಲ್‌ ಶತಕ ವೈಭವ ಬೆಂಗಳೂರು: ಆರಂಭಿಕ ಬ್ಯಾಟರ್‌ ದೇವದತ್ತ ಪಡಿಕ್ಕಲ್‌ (ಔಟಾಗದೆ 124, 62 ಎ., 4X14, 6X4) ಅವರ ಅಬ್ಬರದ ಶತಕದ ನೆರವಿನಿಂದ ಕರ್ನಾಟಕ ತಂಡ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಮೊಹಾಲಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮಯಂಕ್‌ ಅಗರವಾಲ್ ಬಳಗ 99 ರನ್‌ಗಳಿಂದ ಮಹಾರಾಷ್ಟ್ರ ತಂಡವನ್ನು ಮಣಿಸಿತು. ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 215 ರನ್‌ ಪೇರಿಸಿದರೆ, ಮಹಾರಾಷ್ಟ್ರ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗೆ 116 ರನ್ ಮಾತ್ರ ಪೇರಿಸಿತು. ವಿದ್ವತ್‌ ಕಾವೇರಪ್ಪ (19ಕ್ಕೆ 3) ಮತ್ತು ವೈಶಾಖ್‌ ವಿಜಯಕುಮಾರ್‌ (20‌ಕ್ಕೆ2) ಅವರ ಬಿಗುವಾದ ಬೌಲಿಂಗ್‌ ಕಾರಣ ಮಹಾರಾಷ್ಟ್ರ ತಂಡ ಯಾವುದೇ ಪೈಪೋಟಿ ನೀಡದೆ ಶರಣಾಯಿತು. ಪಡಿಕ್ಕಲ್‌ ಮಿಂಚು: ಕರ್ನಾಟಕ ತಂಡದ ನಾಯಕ ಮಯಂಕ್‌ ಅಗರವಾಲ್‌ (28 ರನ್‌, 17 ಎ.) ಬಿರುಸಿನ ಆರಂಭ ಪಡೆದರೂ, ಹೆಚ್ಚುಹೊತ್ತು ನಿಲ್ಲಲಿಲ್ಲ. ಆದರೆ ಪಡಿಕ್ಕಲ್‌ ಮತ್ತು ಮನೀಷ್‌ ಪಾಂಡೆ (50 ರನ್‌, 38 ಎ., 4X1, 6X4) ಉತ್ತಮ ಜತೆಯಾಟದ ಮೂಲಕ ತಂಡವನ್ನು ಬೃಹತ್‌ ಮೊತ್ತದತ್ತು ಮುನ್ನಡೆಸಿದರು. ಎದುರಾಳಿ ಬೌಲಿಂಗ್‌ ದಾಳಿಯನ್ಜು ಪುಡಿಗಟ್ಟಿದ ಪಡಿಕ್ಕಲ್‌ 14 ಬೌಂಡರಿ ಮತ್ತು 6 ಸಿಕ್ಸರ್‌ ಹೊಡೆದರು. ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 215 (ದೇವದತ್ತ ಪಡಿಕ್ಕಲ್‌ ಔಟಾಗದೆ 124, ಮಯಂಕ್‌ ಅಗರವಾಲ್‌ 28, ಮನೀಷ್‌ ಪಾಂಡೆ 50, ಅಭಿನವ್‌ ಮನೋಹರ್‌ ಔಟಾಗದೆ 7, ಆಶಯ್‌ ಪಾಲ್ಕರ್‌ 24ಕ್ಕೆ 1, ರಾಮಕೃಷ್ಣ ಘೋಷ್‌ 58ಕ್ಕೆ 1) ಮಹಾರಾಷ್ಟ್ರ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 116 (ದಿವ್ಯಾಂಗ್ ಹಿಂಗನೇಕರ್‌ 47, ಶಂಸುಜಮಾ ಖಾಜಿ ಔಟಾಗದೆ 28, ವಿದ್ವತ್‌ ಕಾವೇರಪ್ಪ 19ಕ್ಕೆ 3, ವೈಶಾಖ್‌ ವಿಜಯಕುಮಾರ್‌ 20ಕ್ಕೆ 2, ವಿ.ಕೌಶಿಕ್‌ 23ಕ್ಕೆ 1, ಕೆ.ಗೌತಮ್‌ 15ಕ್ಕೆ 1, ಶ್ರೇಯಸ್‌ ಗೋಪಾಲ್‌ 15ಕ್ಕೆ 1) ಫಲಿತಾಂಶ: ಕರ್ನಾಟಕಕ್ಕೆ 99 ರನ್ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.