ಐಸಿಸಿ ರ‍್ಯಾಂಕಿಂಗ್: ಎರಡನೇ ಸ್ಥಾನ ಉಳಿಸಿಕೊಂಡ ಸೂರ್ಯ ದುಬೈ: ’ಭಾರತ ತಂಡದ ಎಬಿ ಡಿವಿಲಿಯರ್ಸ್‌ ಆಗಬಲ್ಲ ಸಮರ್ಥ ಆಟಗಾರ ‘ ಎಂದು ದಕ್ಷಿಣ ಆಫ್ರಿಕಾ ತಾರಾ ಕ್ರಿಕೆಟಿಗ ಡೇಲ್‌ ಸ್ಟೇಯ್ನ್ ಅವರಿಂದ ಮೆಚ್ಚುಗೆ ಗಳಿಸಿರುವ ಸೂರ್ಯಕುಮಾರ್ ಯಾದವ್ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಟಿ20 ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಈಚೆಗೆ ಭಾರತದಲ್ಲಿ ನಡೆದ ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯಲ್ಲಿ ಅವರು ಅಮೋಘವಾಗಿ ಆಡಿದ್ದರು. ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್ ಆಗಿದ್ದರು. ಅವರ ಖಾತೆಯಲ್ಲಿ ಒಟ್ಟು 838 ಅಂಕಗಳಿವೆ. ಪಾಕಿಸ್ತಾನದ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಅಗ್ರಸ್ಥಾನದಲ್ಲಿದ್ದಾರೆ. 32 ವರ್ಷದ ಸೂರ್ಯ ಪಟ್ಟಿಯ ಅಗ್ರ ಹತ್ತರಲ್ಲಿರುವ ಭಾರತದ ಏಕೈಕ ಆಟಗಾರರಾಗಿದ್ದಾರೆ. ಕೆ.ಎಲ್. ರಾಹುಲ್ ಹಾಗೂ ವಿರಾಟ್ ಕೊಹ್ಲಿ ಅವರು ಕ್ರಮವಾಗಿ 13 ಹಾಗೂ 14ನೇ ಸ್ಥಾನದಲ್ಲಿದ್ದಾರೆ. ನಾಯಕ ರೋಹಿತ್ ಶರ್ಮಾ 16ನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ತಂಡದ ಡೇವೊನ್ ಕಾನ್ವೆ ಐದನೇ ಸ್ಥಾನಕ್ಕೆ ಜಿಗಿದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಶಿಖರ್ ಧವನ್, ವಿರಾಟ್ ಹಾಗೂ ರೋಹಿತ್ ಶ್ರೇಯಾಂಕಗಳು ಕುಸಿದಿವೆ. ವೇಗಿ ಜಸ್‌ಪ್ರೀತ್ ಬೂಮ್ರಾ ಬೌಲರ್‌ಗಳ ವಿಭಾಗದಲ್ಲಿ 10ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.